ಶ್ರೀಮಂಗಲ, ಜು. ೨೬: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆ ಮತ್ತು ಕೊಡಗು ಹೆಲ್ತ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು ೩೦೦ಕ್ಕೂ ಅಧಿಕ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರಸ್ತಾವಿಕವಾಗಿ ಮಾತನಾಡಿದ ಪೊಮ್ಮಕ್ಕಡ ಕೂಟಡ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವರು ಉತ್ತಮ ಆರೋಗ್ಯ ಭಾಗ್ಯಕ್ಕಿಂತ ಬೇರೆ ಯಾವುದೇ ಸಂಪತ್ತು ಇಲ್ಲ. ಇಂದಿನ ಕಾಲದಲ್ಲಿ ಜನರಿಗೆ ವಿವಿಧ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ ಸಮಾಜ ಕೇವಲ ಕಲ್ಯಾಣ ಮಂಟಪಕ್ಕೆ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಸಾಧ್ಯವಾದಷ್ಟು ಜನರಿಗೆ ಪ್ರಯೋಜನವಾಗುವ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.

ಕೊಡಗು ಹೆಲ್ತ್ ಫೌಂಡೇಶನ್ ಕಾರ್ಯದರ್ಶಿ ಮತ್ತು ಲೋಪಮುದ್ರ ಆಸ್ಪತ್ರೆಯ ಮುಖ್ಯ ತಜ್ಞ ವೈದ್ಯರಾದ ಡಾ. ಮುಕ್ಕಾಟಿರ ಅಮೃತ್ ನಾಣಯ್ಯ ಮಾತನಾಡಿ ನಿರಂತರವಾಗಿ ಆರೋಗ್ಯ ಜಾಗೃತಿಗಾಗಿ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭ ಹಂತದಲ್ಲಿಯೇ ರೋಗ ಪತ್ತೆಯಾದರೆ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರು.

ಆಸ್ಪತ್ರೆಯ ಕಣ್ಣಿನ ತಜ್ಞ ವೈದ್ಯರಾದ ಡಾ.ಸೌಮ್ಯ ಗಣೇಶ್ ನಾಣಯ್ಯ ಮಾತನಾಡಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ಧತಿ, ವ್ಯಾಯಾಮ ಹಾಗೂ ನಿಯಮಿತ ಆರೋಗ್ಯ ತಪಾಸಣೆಯತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು.

ಲೋಪಮುದ್ರ ಆಸ್ಪತ್ರೆಯ ಮತ್ತೋರ್ವ ಜನರಲ್ ಸರ್ಜನ್ ಡಾ.ಕಡೆಮಾಡ ತರುಣ್ ಜೋಯಪ್ಪ ಆರೋಗ್ಯ ಸಮಸ್ಯೆಯ ಬಗ್ಗೆ ನಿರ್ಲಕ್ಷö್ಯ ಮಾಡದೆ ಆರಂಭದ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣ ಗುಣವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು. ಮಧುಮೇಹ ಉಳ್ಳವರಿಗೆ ನಿಯಮಿತ ವ್ಯಾಯಾಮ, ಆಹಾರ ನಿಯಂತ್ರಣ, ನಿಯಮಿತ ಚಿಕಿತ್ಸೆ ಅತ್ಯಗತ್ಯ ಎಂದರು.

ಹೃದಯಾಘಾತವಾದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರಾತ್ಯಾಕ್ಷಿಕೆ ನಡೆಯಿತು. ಚಕ್ಕೆರ ವಾಣಿ ಸಂಜು ಪ್ರಾರ್ಥಿಸಿ, ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಸ್ವಾಗತಿಸಿ, ಕೊಡವ ಸಮಾಜ ನಿರ್ದೇಶಕ ಕೊಣಿಯಂಡ ಸಂಜು ಸೋಮಯ್ಯ ವಂದಿಸಿದರು, ಪೊಮ್ಮಕ್ಕಡ ಕೂಟದ ಗೌ. ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ , ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನಿರ್ದೇಶಕರುಗಳಾದ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ. ಗಂಗಮ್ಮ, ಪಾರುವಂಗಡ ದಿಲನ್ ಚಂಗಪ್ಪ ಮತ್ತು ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ ಪೂಣಚ್ಚ, ಖಜಾಂಚಿ ಮೂಕಳೇರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ ಬಲ್ಯಮೀದೇರಿರ ಆಶಾ ಶಂಕರ್, ಕೊಟ್ಟಂಗಡ ವಿಜು ದೇವಯ್ಯ, ಚೆಕ್ಕೆರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ ಹಾಜರಿದ್ದರು. ಶಿಬಿರದಲ್ಲಿ ಸುಮಾರು ೩೦ ಅಧಿಕ ವೈದ್ಯಕೀಯ, ವೈದ್ಯಕೀಯೇತರ ಶಿಬ್ಬಂದಿ ಪಾಲ್ಗೊಂಡಿದ್ದರು.

-ಹರೀಶ್ ಮಾದಪ್ಪ