ಸೋಮವಾರಪೇಟೆ, ಜು. ೨೫: ಬಿಡದಿ ಟೌನ್‌ಶಿಪ್ ವಿರುದ್ಧ ಸ್ಥಳೀಯವಾಗಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ನೀಡಲು ಸೋಮವಾರಪೇಟೆ ಭಾಗದಿಂದ ಹೊರಟಿದ್ದ ರೈತರನ್ನು ದಾರಿ ಮಧ್ಯೆ ಪೊಲೀಸರು ತಡೆದು, ಬಂಧಿಸಿದ ಹಿನ್ನೆಲೆ ರೈತ ಸಂಘ ಹಾಗೂ ತಾಲೂಕು ರೈತ ಹೋರಾಟ ಸಮಿತಿ ಸದಸ್ಯರು, ಸ್ಥಳೀಯ ರೈತರು ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಬಿಡದಿ ಟೌನ್‌ಶಿಪ್ ಹೋರಾಟದಲ್ಲಿ ಭಾಗಿಯಾಗಲು ಸೋಮವಾರಪೇಟೆ ಭಾಗದಿಂದ ಹೊರಟಿದ್ದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಸೇರಿದಂತೆ ಇತರರನ್ನು ಶನಿವಾರಸಂತೆ ಪೊಲೀಸರು ದಾರಿ ಮಧ್ಯೆ ತಡೆದು ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಗೆ ಕರೆದುಕೊಂಡು ಹೋದರು.

ರೈತರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕಾರ್ಯದರ್ಶಿ ದಿವಾಕರ್ ಕೂತಿ, ಕೊಡ್ಲಿಪೇಟೆಯ ಭಗವಾನ್ ಹಾಗೂ ಪ್ರಮುಖರು ಠಾಣೆ ಎದುರು ಪ್ರತಿಭಟನೆ ನಡೆಸಿ, ರೈತರ ಬಿಡುಗಡೆಗೆ ಆಗ್ರಹಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆ ಬಂದಿತರಾಗಿದ್ದ ರೈತರನ್ನು ಪೊಲೀಸರು ಬಿಡುಗಡೆಗೊಳಿಸಿದರು.

ನಂತರ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ರೈತರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಅನ್ನದಾತ ರೈತರ ಬದುಕು ಕಿತ್ತುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆಯು ರೈತರ ಬದುಕನ್ನು ಬೀದಿಗೆ ತರಲಿದೆ. ಅಂತೆಯೇ ಕೊಡಗಿನಲ್ಲಿಯೂ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಯಿದ್ದು, ರೈತರ ಬದುಕು ಕಸಿದುಕೊಳ್ಳುವ ಯತ್ನ ಸರ್ಕಾರಗಳಿಂದ ನಡೆಯುತ್ತಿದೆ. ಇದರ ವಿರುದ್ಧವೂ ಹೋರಾಟ ನಡೆಯುತ್ತಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹೇಳಿದರು.

ಅನ್ನ ನೀಡುವ ರೈತರನ್ನು ಬಂಧಿಸುವ ಸರ್ಕಾರದ ವಿರುದ್ಧ ರೈತರು ಇನ್ನಷ್ಟು ಪ್ರತಿಭಟನೆ ನಡೆಸಬೇಕಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳು ರೈತರ ಬದುಕನ್ನು ಹಾಳು ಮಾಡಲು ಹೊರಟಿದ್ದು, ಇದಕ್ಕೆ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅನಂತ್ ಕುಮಾರ್, ಅಶೋಕ್, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಭಾಗದ ಬೆಳೆಗಾರರ ಸಂಘದ ಪ್ರಮುಖರು, ರೈತ ಸಂಘ ಹಾಗೂ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.