ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಜು. ೨೫: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಎಐಸಿಸಿ ವೀಕ್ಷಕರನ್ನು ನೇಮಕ ಮಾಡಿದ್ದು, ಕೊಡಗು ಜಿಲ್ಲೆಗೆ ವೀಕ್ಷಕರಾಗಿ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತಾನ್ ಅವರನ್ನು ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ಇದೀಗ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸದ್ದಿಲ್ಲದೇ ಆಕಾಂಕ್ಷಿಗಳು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ತಿತೀರ ಧರ್ಮಜ ಉತ್ತಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಕೆ ಮಂಜುನಾಥ್ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಧರ್ಮಜ ಉತ್ತಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಲಾಗಿತ್ತು. ಬಹುತೇಕ ಜಿಲ್ಲೆಗಳಲ್ಲಿ ಐದರಿಂದ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರು ಕೂಡ ಇದ್ದಾರೆ. ಆದರೆ ಧರ್ಮಜ ಉತ್ತಪ್ಪ ಅವರು ಅಧ್ಯಕ್ಷರಾಗಿ ಮೂರು ವರ್ಷ ಮಾತ್ರ ಕಳೆದಿದ್ದು, ಒಂದು ವೇಳೆ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡದೇ, ಜಿಲ್ಲಾ ಪಂಚಾಯತ್ ಚುನಾವಣೆವರೆಗೂ ಇವರನ್ನೇ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿ.ಕೆ ಲೋಕೇಶ್, ವಿ.ಪಿ. ಶಶಿಧರ್, ಮಂಜುನಾಥ್ ಗುಂಡೂರಾವ್, ನಾಪಂಡ ಮುತ್ತಪ್ಪ, ಪಟ್ಟಡ ರಂಜಿ ಪೂಣಚ್ಚ ಅವರು ಆಕಾಂಕ್ಷಿಗಳಾಗಿದ್ದಾರೆ.

ಮಡಿಕೇರಿ ಕ್ಷೇತ್ರದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು?

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದವರಿಗೆ ನೀಡಬೇಕೆಂಬ ಕೂಗು ಕಳೆದ ಒಂದು ವರ್ಷದ ಹಿಂದೆಯೇ ಪ್ರಬಲವಾಗಿ ಕೇಳಿಬಂದಿತ್ತು. ಹಾಲಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿತ್ತು. ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

ಜಾತಿ ಆಧಾರದಲ್ಲಿ ಆಯ್ಕೆ!

ಕೊಡಗು ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ ನೀಡಬೇಕಾದರೂ ಜಾತಿ ಆಧಾರದಲ್ಲೇ ನಡೆಯಲಿದೆ. ಒಂದು ವೇಳೆ ಧರ್ಮಜ ಉತ್ತಪ್ಪ ಅವರನ್ನು ಬದಲಾವಣೆ ಮಾಡಿದಲ್ಲಿ ಮತ್ತೆ ಕೊಡವ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯೂ ಇದೆ.

ಬಿಜೆಪಿಯಲ್ಲಿ ಕೊಡವ ಜನಾಂಗಕ್ಕೆ ಸೇರಿದ ನಾಪಂಡ ರವಿ ಕಾಳಪ್ಪ ಅವರು ಅಧ್ಯಕ್ಷರಾಗಿದ್ದಾರೆ. ಏಕೆಂದರೆ ಈ ಹಿಂದೆ ದಿ. ಶಿವು ಮಾದಪ್ಪ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿದ ಸಂದರ್ಭದಲ್ಲಿ ಒಕ್ಕಲಿಗ ಗೌಡ ಜನಾಂಗದ ಕೆ.ಕೆ ಮಂಜುನಾಥ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದರು. ಆದರೆ ಇದೀಗ ಜಿಲ್ಲೆಯ ರಾಜಕೀಯ ಸಂಪೂರ್ಣ ಬದಲಾವಣೆ ಕೂಡ ಕಂಡಿದೆ. ಒಂದು ವೇಳೆ ಧರ್ಮಜ ಉತ್ತಪ್ಪನವರನ್ನು ಬದಲಾವಣೆ ಮಾಡುವುದಾದರೆ ಮತ್ತೆ ಕೊಡವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ನಿಶ್ಚಿತ!

ಕೊಡಗು ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಅಧ್ಯಕ್ಷರ ಅವಧಿ ಐದು ವರ್ಷ ಪೂರ್ಣಗೊಂಡರೂ ಕೂಡ ಇದುವರೆಗೆ ಅಧ್ಯಕ್ಷ ಬದಲಾವಣೆಗೆ ಮುಂದಾಗಿಲ್ಲ.

ಸದ್ಯದಲ್ಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೂಡ ಬದಲಾವಣೆ ಮಾಡುವುದು ನಿಶ್ಚಿತವಾಗಿದೆ. ಆದರೆ ಕೆಲವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಮನಸ್ಸಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿದೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಕಾರ್ಯಾಧ್ಯಕ್ಷರಾಗಿ ಶೌಕತ್ ಅಲಿ ಅವರನ್ನು ನೇಮಕ ಮಾಡಲಾಗಿದೆ.

ಆದರೆ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದ ವ್ಯಕ್ತಿಯೊಬ್ಬರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದು ಉತ್ತಮ ಬೆಳೆವಣಿಗೆಯಲ್ಲ. ಪಕ್ಷದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವವರಿಗೆ ಸ್ಥಾನ ನೀಡಲಿ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಅರೆಭಾಷೆ ಜನಾಂಗದ ಮುಖಂಡರೊಬ್ಬರು ಮಾಹಿತಿ ಹಂಚಿಕೊAಡಿದ್ದಾರೆ. ಅದಲ್ಲದೇ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅರೆಭಾಷೆ ಜನಾಂಗದವರಿಗೆ ನೀಡಬೇಕೆಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿದೆ. ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆ ಕಡಿಮೆ. ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.