ಪೊನ್ನAಪೇಟೆ, ಜು. ೨೫: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಮುಂಬರುವ ಆಗಸ್ಟ್ ೯ ರಂದು ವೀರಾಜಪೇಟೆ ಸಮೀಪದ ಕೊಮ್ಮೆತೋಡಿನಲ್ಲಿ ಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮವನ್ನು ಆಯೋಜಿಸಲಾಗಿದೆ. ಜಾತಿ ಧರ್ಮದ ಭೇದವಿಲ್ಲದೆ ನಡೆಯುವ ಈ ಕ್ರೀಡಾಸಂಗಮದಲ್ಲಿ ಕೊಡಗಿನ ತಂಡಗಳು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಕೆ.ಎಂ.ಎಸ್.ಎ ಅಧ್ಯಕ್ಷರಾದ ಆಲೀರ ಎಂ. ರಶೀದ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ಏರ್ಪಡಿಸಿರುವ ಕೆಸರುಗದ್ದೆ ಕ್ರೀಡಾ ಸಂಗಮವು ವೀರಾಜಪೇಟೆ-ಅಮ್ಮತ್ತಿ ಮುಖ್ಯ ರಸ್ತೆಯಲ್ಲಿರುವ ಕೊಮ್ಮೆತೋಡಿನ ಸೇತುವೆ ಬಳಿಯ ಗದ್ದೆಯಲ್ಲಿ ನಡೆಯಲಿದೆ. ಈ ಕ್ರೀಡಾ ಸಂಗಮದಲ್ಲಿ ಓಟದ ಸ್ಪರ್ಧೆ, ಫುಟ್ಬಾಲ್ ಮತ್ತು ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
೭+೩ ಹೆಚ್ಚುವರಿ ಆಟಗಾರರ ಫುಟ್ಬಾಲ್ ಮತ್ತು ೯+೨ ಹೆಚ್ಚುವರಿ ಸ್ಪರ್ಧಿಗಳ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ಸೇರಿದಂತೆ, ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕರ ವಿಭಾಗದ ಕೆಸರುಗದ್ದೆ ಓಟದ ಸ್ಪರ್ಧೆಯನ್ನು ಪ್ರತ್ಯೇಕವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ರೂ ೨೦ ಸಾವಿರ, ರನ್ನರ್ಸ್ ತಂಡಕ್ಕೆ ರೂ. ೧೦ ಸಾವಿರ ಹಾಗೂ ತೃತೀಯ ಸ್ಥಾನ ಗಳಿಸುವ ತಂಡಕ್ಕೆ ರೂ. ೫ ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ, ಪುರುಷರ ಹಗ್ಗಜಗಾಟ ಸ್ಪರ್ಧೆಯ ವಿನ್ನರ್ಸ್ ತಂಡಕ್ಕೆ ರೂ.೧೫ ಸಾವಿರ, ರನ್ನರ್ಸ್ ತಂಡಕ್ಕೆ ರೂ.೧೦ ಸಾವಿರ, ತೃತೀಯ ಸ್ಥಾನ ಗಳಿಸುವ ತಂಡಕ್ಕೆ ರೂ. ೫ ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ ರಶೀದ್, ಎಲ್ಲಾ ವಿಭಾಗದ ಓಟದ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದ ನಗದು ಬಹುಮಾನ ಮತ್ತು ಪಾರಿತೋಷಕವನ್ನು ನೀಡಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಎಸ್.ಎ. ನಿರ್ದೇಶಕರಾದ ಕೋಳುಮಂಡ ರಫೀಕ್ ಮಾತನಾಡಿ, ಕ್ರೀಡಾ ಸಂಗಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಳೆದ ಹಲವು ದಶಕಗಳಿಂದ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇಬ್ಬರೂ ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೇಗೂರಿನ ಆಲೀರ ಎಂ. ರಶೀದ್ (ಮುತ್ತು) ಮತ್ತು ನೆಲಜಿಯ ಮಣವಟ್ಟಿರ ಎಂ. ಪೊನ್ನಪ್ಪ (ಪೊನ್ನು) ಅವರನ್ನು ಕೊಡವ ಮುಸ್ಲಿಂ ಕ್ರೀಡಾ ಅಕಾಡೆಮಿಯ ಪರವಾಗಿ ಅಂದು ಸನ್ಮಾನಿಸಲಾಗುವುದು ಎಂದು ತಿಳಿಸಿದರಲ್ಲದೆ, ಕೆಸರುಗದ್ದೆ ಕ್ರೀಡಾ ಸಂಗಮದ ಕುರಿತು ಹೆಚ್ಚಿನ ಮಾಹಿತಿಗಾಗಿ ೯೪೪೮೧೫೬೬೬೮, ೯೪೮೧೮೫೯೧೦೦ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕೆ.ಎಂ.ಎಸ್.ಎ. ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಅಬ್ದುಲ್ಲಾ, ಪುಂಜೆರ ಹಂಸ, ಮಂದಮಾಡ ಮುನ್ನಾ ಉಪಸ್ಥಿತರಿದ್ದರು.