ಸೋಮವಾರಪೇಟೆ, ಜು. ೨೫: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ನೀಡುವ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ಕೊಡಗಿನ ೬ ಮಂದಿ ಭಾಜನರಾಗಿದ್ದು, ಮೈಸೂರಿನಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ ಮೀಸಲಾತಿಯ ೧೦೭ನೇ ವರ್ಷಾಚರಣೆ ಹಾಗೂ ವೇದಿಕೆಯ ೧೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ನಂಜರಾಜ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿö್ಮÃ ಚೌದರಿ ಅವರು ಜಿಲ್ಲೆಯ ೬ ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಅಮ್ಮತ್ತಿ ಗ್ರಾಮ ನಿವಾಸಿ ಚೋಕಂಡ ಸಂಜು ಸುಬ್ಬಯ್ಯ, ಗೋಣಿಕೊಪ್ಪದ ಕೊಟ್ಟಂಗಡ ವಿಜು ದೇವಯ್ಯ, ಸೋಮವಾರಪೇಟೆ ವಿಭಾಗದ ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್, ಕೈಕೇರಿ ಗ್ರಾಮದ ಪುಳಿಂಜನ ಪೂವಯ್ಯ ಅವರುಗಳಿಗೆ ರಾಜ್ಯಮಟ್ಟದ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಮೈಸೂರಿನಲ್ಲಿ ನೆಲೆಸಿರುವ ಮೂಲತಃ ಕೊಡಗಿನ ಅಪ್ಪನೆರವಂಡ ಡಾ. ಸೋನಿಯಾ ಮಂದಪ್ಪ, ಗೋಣಿಕೊಪ್ಪದ ಕವಿತಾ ಶ್ರೀನಿವಾಸ್ ಅವರುಗಳಿಗೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯಾಧ್ಯಕ್ಷೆ ಹೆಚ್.ಎಲ್. ಯಮುನಾ ವಹಿಸಿದ್ದರು. ವೇದಿಕೆಯಲ್ಲಿ ಜಯಚಾಮರಾಜ ಒಡೆಯರ್ ಅವರ ಅಳಿಯ ರಾಜಾಚಂದ್ರ ಅರಸ್, ವೇದಿಕೆಯ ಗೌರವಾಧ್ಯಕ್ಷ ಹೆಚ್.ಕೆ. ರಾಮು, ಕೃಷಿ ವಿಜ್ಞಾನಿ ಡಾ. ವೇಣುಗೋಪಾಲ್, ವಸಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ. ನಂದೀಶ್, ವೇದಿಕೆಯ ಪಾಂಡವಪುರ ತಾಲೂಕು ಅಧ್ಯಕ್ಷ ರಾಮಕೃಷ್ಣೇ ಗೌಡ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಲೋಕೇಶ್, ಸಮಾಜ ಸೇವಕ ನರಸಿಂಹೇಗೌಡ, ಸಂಚಾಲಕ ಡಿ.ಸಿ. ಬಾಬು ಸೇರಿದಂತೆ ಇತರರು ಇದ್ದರು.