ನಾಪೋಕ್ಲು, ಜು.೨೪: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಅಗಲಿದ ತಾರೆ ದಕ್ಷಿಣ ಭಾರತದ ಗಾನಕೋಗಿಲೆ ಎಸ್ ಜಾನಕಿ ಅವರಿಗೆ ಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅವರು ಎಸ್ ಜಾನಕಿ ಅವರ ಬದುಕಿನ ಪಯಣದ ಕುರಿತು ಮಾತನಾಡಿ, ೪೮ ಸಾವಿರ ಹಾಡುಗಳಿಗೆ ಭಾವನೆಯ ಜೀವ ತುಂಬುವ ಮೂಲಕ ೧೭ ಭಾಷೆಗಳ ಸಂಗೀತದ ಒಡತಿ ಎಂದೆನಿಸಿಕೊAಡು ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ಎಸ್ ಜಾನಕಿಯವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
ಮಹಿಳಾ ಒಕ್ಕೂಟದ ಸದಸ್ಯರು, ಯುವ ವೇದಿಕೆಯ ಸದಸ್ಯರು ಒಟ್ಟಾಗಿ ಸೇರಿ ಜಾನಕಮ್ಮನವರ ‘ಆಕಾಶ ದೀಪವು ನೀನೆ’ ಗೀತೆಯನ್ನು ಹಾಡಿ ಗೀತ ನಮನ ಸಲ್ಲಿಸಿದರು. ಸದಸ್ಯರಾದ ಬೈಮನ ಜ್ಯೋತಿ ತಿಮ್ಮಯ್ಯ, ಕಾಂತಿ ದಯಾನಂದ, ಭವಾನಿ ದಿಲೀಪ್, ಕಡ್ಯದ ಸ್ಮಿತಾ ಜೀವನ್ ಅವರುಗಳು ಎಸ್ ಜಾನಕಿಯವರ ಗೀತೆಗಳಿಗೆ ದನಿಯಾದರು.
ಕಾರುಗುಂದ ಗೌಡ ಯುವ ವೇದಿಕೆಯ ಉಪಾಧ್ಯಕ್ಷ ದಾಯನ ಪುರ್ಶಿನ್, ಕಾರ್ಯದರ್ಶಿ ಕೇಟೋಳಿ ಯಶ್ವಂತ್ ಸೇರಿದಂತೆ ಮಹಿಳಾ ಒಕ್ಕೂಟ ಹಾಗೂ ಯುವ ವೇದಿಕೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೂಡಕಂಡಿ ಸೋನಿ ಸರ್ವರನ್ನು ಸ್ವಾಗತಿಸಿ ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿ ಯುವ ವೇದಿಕೆ ಅಧ್ಯಕ್ಷರಾದ ಪ್ರದೀಪ್ ಪಾರೆಮಜಲು ವಂದಿಸಿದರು.