(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜು. ೨೨: ಪಡಿತರ ಚೀಟಿದಾರರು(ರೇಷನ್ ಕಾರ್ಡ್) ಜಾತಿ ಪ್ರಮಾಣ ಪತ್ರ ಮ್ಯಾಪಿಂಗ್ ಮಾಡಬೇಕೆಂಬ ಸರ್ಕಾರದ ಆದೇಶಕ್ಕೆ ಇದೀಗ ಬಡವರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಕೊಡಗು ಜಿಲ್ಲೆಯ ಐದು ತಾಲೂಕು ಸೇರಿ ಒಟ್ಟು ೧ ಲಕ್ಷದ ೩೯ ಸಾವಿರದ ೨೪೭ ಮಂದಿ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಹಾರ ಇಲಾಖೆ ಸೂಚನೆ ನೀಡಿದೆ.

ಇದರ ಅನ್ವಯ ತಾಲೂಕು ಆಹಾರ ಇಲಾಖೆಯ ಆಯಾ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಬೇಕಾದÀವರ ಮಾಹಿತಿಯನ್ನು ನೀಡಲಾಗಿದೆ. ನ್ಯಾಯ ಬೆಲೆ ಅಂಗಡಿಯ ಮಾಲೀಕರು ತಮ್ಮ ವ್ಯಾಪ್ತಿಯ ಪಡಿತರ ಚೀಟಿದಾರರ ಮಾಹಿತಿಯನ್ನು ನೀಡಿ ಇದೀಗ ಜಾತಿ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಇ.ಕೆ.ವೈಸಿ ಮಾಡಿಸುತ್ತಿದ್ದಾರೆ.ಜಾತಿ ಪ್ರಮಾಣ ಪತ್ರ ಮಾಡಿಸಲು ಕೂಲಿ ಬಿಟ್ಟು ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಪಡಿತರ ಚೀಟಿ ರದ್ದಾಗುವ ಆತಂಕ ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ

ಬಹುತೇಕ ಭಾಗಗಳಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಯಲ್ಲಿ ಪಡಿತರ ಪಡೆದುಕೊಳ್ಳುವವರಿಗೆ ಎರಡು ವಾರದೊಳಗೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಆದರೆ ಸರ್ಕಾರ ಹಾಗೂ ಆಹಾರ ಸರಬರಾಜು ಮತ್ತು ನಾಗರಿಕ ಇಲಾಖೆಯು ಅವಧಿಯ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ. ಪಡಿತರ ಚೀಟಿ ರದ್ದಾಗುವ ಆತಂಕದಿAದ ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರ ಮಾಡಿಸಲು ನಾಡ ಕಚೇರಿ, ತಾಲೂಕು ಕಚೇರಿ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವೀರಾಜಪೇಟೆ ತಾಲೂಕು ಆಹಾರ ಸರಬರಾಜು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇಲಾಖೆಯ ನಿರ್ದೇಶಕಿಯಾದ ಸೀನಾ ಕುಮಾರಿ ಅವರು ಹೇಳುವ ಪ್ರಕಾರ ಎಸ್.ಸಿ ಮತ್ತು ಎಸ್.ಟಿ ಪಡಿತರ ಚೀಟಿದಾರರು ಮಾತ್ರ ಜಾತಿ ಪ್ರಮಾಣ ಪತ್ರ ನೀಡಿದರೆ ಸಾಕು.ಇನ್ನುಳಿದ ಇತರ ಜಾತಿಯವರು ಜಾತಿ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಲ್ಲ.ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಮಾತ್ರ ನೀಡಿದರೆ ಸಾಕು,ಇದರ ಬಗ್ಗೆ ಈಗಾಗಲೇ ನಮ್ಮ ಗ್ರೂಪ್‌ನಲ್ಲಿ ಕೂಡ ಮಾಹಿತಿ ನೀಡಿದ್ದೇವೆ ಎಂದು ಹೇಳುತ್ತಾರೆ.

ಇಕ್ಕಟ್ಟಿಗೆ ಸಿಲುಕಿದ ಅನಕ್ಷರಸ್ಥರು!?

ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಸರ್ಕಾರದ ಆದೇಶಕ್ಕೆ ಇದೀಗ ಅನಕ್ಷರಸ್ಥರು,ಬಡವರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಕೂಲಿ ಬಿಟ್ಟು ಜಾತಿ ಪ್ರಮಾಣ ಪತ್ರ ಮಾಡಲು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಜಾತಿ ಪ್ರಮಾಣ ಪತ್ರ ಮಾಡಲು ಟಿಸಿ(ಶಾಲಾ ವರ್ಗಾವಣಾ ಪತ್ರ) ಕಡ್ಡಾಯವಾಗಿದೆ.೫೦ ವರ್ಷ ಮೇಲ್ಪಟ್ಟ ಬಹುತೇಕ ಪಡಿತರ ಚೀಟಿ ಸದಸ್ಯರಿಗೆ ಟಿ.ಸಿ ಇಲ್ಲ. ಮಗನಿಗೆ ಟಿ.ಸಿ ಇದ್ದರೆ,ಆ ಟಿಸಿ ಮೂಲಕ ತಂದೆಗೆ ಜಾತಿ ಪ್ರಮಾಣ ಪತ್ರ ಮಾಡಬಹುದಾಗಿದೆ. ಆದರೆ ಈ ನಿಯಮ ತಾಯಿಗೆ ಅನ್ವಯವಾಗುವುದಿಲ್ಲ. ತಾಯಿಗೆ ಅವರ ತಮ್ಮ ಅಥವಾ ಸಹೋದರಿಯರ ಟಿಸಿ ಕಡ್ಡಾಯವಾಗಿದೆ.

ಟಿಸಿ ಇಲ್ಲದ ಪಡಿತರ ಚೀಟಿ ಸದಸ್ಯರು ಅಫಿಡವಿಟ್ ಮಾಡಲು ನೋಟರಿ ಲಾಯರ್ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಅಫಿಡವಿಟ್ ಮಾಡಿಸಲು ೩೫೦ ರಿಂದ ೫೦೦ರೂ ಕೊಡಬೇಕು. ಅದಲ್ಲದೆ ಬಹುತೇಕರು ಗ್ರಾಮ ಒನ್ ಕೇಂದ್ರಗಳ ಮೂಲಕ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.ಜಾತಿ ಪ್ರಮಾಣ ಪತ್ರಕ್ಕೆ ಗ್ರಾಮ ಒನ್ ಕೇಂದ್ರಗಳಲ್ಲಿ ೨೦೦ ರಿಂದ ೨೫೦ರೂ ಪಡೆಯುತ್ತಿದ್ದಾರೆ. ಪಡಿತರ ಚೀಟಿಗೆ ಜಾತಿ ಮ್ಯಾಪಿಂಗ್ ಕಡ್ಡಾಯವಲ್ಲ. ಆದರೂ ಕೂಡ ಪಡಿತರ ಚೀಟಿದಾರರು ಆತಂಕದಿAದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ.