ನಾಪೋಕ್ಲು, ಜು. ೨೨: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಆಚರಿಸಲಾಯಿತು.

ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಕಾರುಗುಂದ ಗೌಡ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ವಿವಿಧ ರೀತಿಯ ಕರಕುಶಲ, ನೇಯ್ಗೆ ಮುಂತಾದ ತರಬೇತಿಯನ್ನು ಸಾಂಕೇತಿಕವಾಗಿ ನೀಡಿದರು.

ಈ ಸಂದರ್ಭ ತುಳಸಿ ಮೋಹನ್ ಅವರು ಮಾತನಾಡಿ, ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಸಾಂಕೇತಿಕವಾಗಿ ಈ ಕಾರ್ಯಕ್ರಮವನ್ನು ನಡೆಸಿದ್ದು ಮುಂದಿನ ದಿನಗಳಲ್ಲಿ ಒಕ್ಕೂಟದ ಸದಸ್ಯರು, ಸ್ಥಳೀಯರು ಹಾಗೂ ಕಲಾಸಕ್ತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ರೀತಿಯ ತರಬೇತಿ ನೀಡಲಾಗುವುದು ಹಾಗೂ ಮಹಿಳಾ ಒಕ್ಕೂಟದ ವತಿಯಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಅನುಕೂಲವಾಗುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಕಾರ್ಯಾಗಾರದಲ್ಲಿ ಕೊಡಪಾಲು ತೀರ್ಥ ಗಣಪತಿ, ಕೇಕಡ ಪೂಜಾ ನಾಗೇಂದ್ರ, ಕೂಡಕಂಡಿ ಸೋನಿ ಸುದೀಪ್, ಬೈಚನ ಸ್ವಾತಿ ಮಂದಪ್ಪ ಅವರುಗಳು ವೈರ್ ಬ್ಯಾಗ್ ಹೆಣೆಯುವುದು, ಉಲನ್ ಶಾಲು, ಮಫ್ಲರ್, ಕೊಡೆ, ಗೌಸ ಇತ್ಯಾದಿಗಳನ್ನು ತಯಾರಿಸುವ ಬಗೆ ಪ್ರಾತ್ಯಕ್ಷಿಕೆ ನೀಡಿದರು.

ಒಕ್ಕೂಟದ ಸದಸ್ಯರು ಹಾಗೂ ಕಾರುಗುಂದ ಗೌಡ ಯುವ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಪಾರೆಮಜಲು, ಉಪಾಧ್ಯಕ್ಷ ದಾಯನ ಪುರ್ಸಿನ್, ಕಾರ್ಯದರ್ಶಿ ಕೇಟೋಳಿ ಯಶವಂತ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ಪ್ರಾರ್ಥಿಸಿ, ಕೂಡಕಂಡಿ ಸವಿತಾ ಬಾಪೂಜಿ ಸ್ವಾಗತಿಸಿದರು. ಪೊಡನೋಳನ ಪವಿತ್ರ ಗಿರೀಶ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ವಂದಿಸಿದರು.