ವೀರಾಜಪೇಟೆ, ಜು. ೨೨: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಜನಗಣತಿ ಹಾಗೂ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಯಿಂದ ಮಹಿಳಾ ಮೀಸಲಾತಿಯನ್ನು ಬೇರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಮಂಡಿಸಬೇಕು. ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆಯೇ ಮುಂದಿನ ಚುನಾವಣೆಯಿಂದ ಶೇ.೩೩ರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ವೀರಾಜಪೇಟೆಯಲ್ಲಿ ಪೋಸ್ಟರ್ ಬಿಡುಗಡೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಮಂಗಳವಾರ ವೀರಾಜಪೇಟೆಯಲ್ಲಿ ಸಂಘಟನೆಯ ಕಛೇರಿಯಲ್ಲಿ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ ಮುಖಂಡರು, ಬಳಿಕ ಸಾರ್ವಜನಿಕರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಂದ ಸಹಿ ಸಂಗ್ರಹಿಸುವ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ರಾಜಕೀಯದಲ್ಲಿ ಮಹಿಳೆಯರ ಸಮಾನ ಪ್ರಾತಿನಿಧ್ಯ ಮತ್ತು ಶೇ.೩೩ ಮೀಸಲಾತಿಯ ಅಗತ್ಯತೆಯನ್ನು ಸಾರುವ ವಿಶೇಷ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಮುಂಬರುವ ಚುನಾವಣೆಗಳಿಂದಲೇ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆ ಶೇಕಡ.೩೩ ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಆಗ್ರಹಿಸಿದರು. ನಗರದ ವಿವಿಧ ಸಾರ್ವಜನಿಕ ಸ್ಥಳ ಗಳಲ್ಲಿ ಬಿರುಸಿನ ಸಹಿ ಸಂಗ್ರಹ ನಡೆ ಯಿತು. ಸಾವಿರಾರು ನಾಗರಿಕರು ಸಹಿ ಮಾಡುವ ಮೂಲಕ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮೀಸಲಾತಿಯನ್ನು ಕೇವಲ ಕಾಗದದ ಮೇಲೆ ಇಡದೇ, .ಮುಂದಿನ ಚುನಾವಣೆಗಳಿಂದಲೇ ಕ್ಷೇತ್ರಗಳ ಆಧಾರದಲ್ಲಿ ಜಾರಿಗೆ ತರಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಬಲವಾಗಿ ಆಗ್ರಹಿಸಿದರು. ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಅಥವಾ ಜನಗಣತಿಯ ನೆಪ ಹೇಳಿ ಮೀಸಲಾತಿ ಜಾರಿಯನ್ನು ವಿಳಂಬ ಮಾಡಬಾರದು ಎಂದು ಮುಖಂಡರು ಒತ್ತಾಯಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಇಂದಿಗೂ ತುಂಬಾ ಕಡಿಮೆಯಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಶೇ.೩೩ ಮೀಸಲಾತಿಯನ್ನು ಮುಂದಿನ ಚುನಾವಣೆಯಿಂದಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ದೇಶದ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ ೧೮೫ ರಾಷ್ಟçಗಳ ಪೈಕಿ ಭಾರತವು ೧೫೧ನೇ ಸ್ಥಾನದಲ್ಲಿರುವುದು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಹಲವು ದಶಕಗಳಿಂದ ಭಾರತೀಯ ಮಹಿಳೆಯರು ತಮ್ಮ ನ್ಯಾಯಸಮ್ಮತ ರಾಜಕೀಯ ಅವಕಾಶ ಮತ್ತು ಅಧಿಕಾರದಿಂದ ವಂಚಿತರಾಗಿದ್ದಾರೆ. ಮಹಿಳೆಯರ ಮೇಲೆ ನಡೆಯತ್ತಿರುವ ಈ ವ್ಯವಸ್ಥಿತ ಅನ್ಯಾಯಕ್ಕೆ ಈಗಲೇ ಅಂತ್ಯ ಹಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನವಾದಿ ಸಂಘಟನೆಯ ಸದಸ್ಯರಾದ ಪ್ರೇಮಾ, ಸೀತೆ, ಸುಮತಿ, ನಂದಿನಿ, ಬಿಂದು, ಮಂಗಳಾ ಸೇರಿದಂತೆ ಪದಾಧಿಕಾರಿಗಳು, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಎ.ಸಿ. ಸಾಬು, ಡಿವೈಎಫ್ಐ ಸಂಘಟನೆಯ ಮುಖಂಡರಾದ ಸಾಧಿಕ್, ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.