ಕೂಡಿಗೆ, ಜು. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಕಕ್ಕೆಹೊಳೆ ಸೇತುವೆ ಶಿಥಿಲಗೊಂಡು ಹಲವು ಕಡೆ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ನೂತನ ಸೇತುವೆ ನಿರ್ಮಾಣಕ್ಕೆ ರೂ. ೩.೫೦ ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ತಿಳಿಸಿದ್ದಾರೆ.

ಸೀಗೆಹೊಸೂರು ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯ ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಕ್ರಿಯಾ ಯೋಜನೆಯಡಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ಈ ವೇಳೆ ಗ್ರಾಮಸ್ಥರು ಎಂಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಭುವನಗಿರಿ-ಯಲಕನೂರು-ಹೊಸಹಳ್ಳಿ-ಸೋಮವಾರಪೇಟೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ, ದೇವಾಲಯ ಸಮಿತಿ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ನಾಗೇಶ್, ಸಹಕಾರ ಸಂಘದ ನಿರ್ದೇಶಕ ಎಸ್.ಎಸ್. ಕೃಷ್ಣ, ಸುನಿಲ್ ರಾವ್, ಹೆಬ್ಬಾಲೆ ರಂಜನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.