ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು.ಜು.೨೧: ಹಸಿರು ಸಿರಿಯ ನಾಡು ಕೊಡಗು ಮಳೆನಾಡಿನ ಸಿರಿವಂತಿಕೆಗೆ ಸಾಕ್ಷಿಯಾಗಿದ್ದ, ಜೀವನದಿಯಾಗಿ ಹರಿಯುತ್ತಿದ್ದ ಲಕ್ಷ್ಮಣ ತೀರ್ಥ ನದಿ, ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಜುಲೈ ತಿಂಗಳ ಅಂತ್ಯದಲ್ಲಿ ಭೋರ್ಗರೆದು ಹರಿಯಬೇಕಿದ್ದ ನದಿಯ ಪಾತ್ರದಲ್ಲಿ ಇಂದು ನೀರಿಗಿಂತ ಕಲ್ಲು ಬಂಡೆಗಳೇ ಹೆಚ್ಚಾಗಿ ಕಾಣುತ್ತಿವೆ.

ದಕ್ಷಿಣ ಕೊಡಗಿನ ಕಾನೂರು ಬಳಿ ಹರಿಯುತ್ತಿರುವ ಲಕ್ಷö್ಮಣ ತೀರ್ಥ ನದಿಯ ಒಡಲು ಬರಿದಾಗಿದ್ದು ಈ ನದಿಯ ಸುತ್ತಮುತ್ತಲಿನಲ್ಲಿ ವಾಸಿಸುತ್ತಿರುವ ನೂರಾರು ರೈತರು ಈ ನದಿಯ ನೀರನ್ನೇ ಅವಲಂಭಿಸಿ ಸಾವಿರಾರು ಏಕರೆ ಭತ್ತದ ಭೂಮಿಯನ್ನು ಕೃಷಿ ಮಾಡುತ್ತಾರೆ. ಆದರೆ ಈ ಬಾರಿ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಭತ್ತದ ಕೃಷಿಗೆ ಹಿನ್ನಡೆಯಾಗಿದೆ.

ಪ್ರಕೃತಿಯನ್ನೇ ನಂಬಿ ಬದುಕುವ ಅನ್ನದಾತನಿಗೆ ಈ ವರ್ಷ ವರುಣದೇವ ಕೈಕೊಟ್ಟಿದ್ದಾನೆ. ಜೂನ್ ತಿಂಗಳಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಶುರುವಾಗಬೇಕಿದ್ದ ಕೃಷಿ ಚಟುವಟಿಕೆಗಳು, ಮಳೆಯ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಗದ್ದೆಗೆ ನೀರು ಹರಿಸಲು ಅನಿವಾರ್ಯವಾಗಿ ರೈತರು ಪಂಪ್‌ಸೆಟ್‌ಗಳನ್ನು ಆಶ್ರಯಿಸಿ, ಕೆರೆ-ಕಟ್ಟೆಗಳಲ್ಲಿ ಉಳಿದಿರುವ ಅಲ್ಪ ಸ್ವಲ್ಪ ನೀರನ್ನು ಗದ್ದೆಗೆ ಹಾಯಿಸಿ ನಾಟಿಗೆ ತಯಾರಿ ನಡೆಸುತ್ತಿದ್ದಾರೆ.

ಕೊಡಗಿನ ಬಹುಪಾಲು ರೈತರ ಬದುಕು ಭತ್ತದ ಕೃಷಿಯ ಮೇಲೆ ಅವಲಂಭಿತವಾಗಿದೆ. ಭೂಮಿಯನ್ನು ಹದಗೊಳಿಸಿ, ಬೀಜಗಳನ್ನು ಚೆಲ್ಲಿ, ಹಸಿರು ಕನಸನ್ನು ಕಾಣುತ್ತಿದ್ದ ರೈತನಿಗೆ ಈಗ ಆತಂಕ ಕಾಡುತ್ತಿದೆ. ಗದ್ದೆಗಳನ್ನು ಪಾಳು ಬಿಡಬಾರದೆಂಬ ಹಠದಿಂದ ಕಷ್ಟಪಟ್ಟು ನಾಟಿಗೆ ಪೈರುಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ, ಸುರಿಯದ ಮಳೆರಾಯನ ಕೃಪೆಯಿಲ್ಲದೆ ಭತ್ತದ ಕೃಷಿ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆ ರೈತನನ್ನು ಕಾಡುತ್ತಿದೆ.

ಲಕ್ಷ್ಮಣ ತೀರ್ಥ ನದಿಯನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದ ಸುತ್ತಮುತ್ತಲಿನ ನೂರಾರು ಕುಟುಂಬಗಳು, ಇದೀಗ ಮಳೆರಾಯನ ಮುಖವನ್ನೇ ನೋಡುತ್ತಾ ದಿನ ಕಳೆಯುತ್ತಿವೆ. ಒಡಲು ಬರಿದಾದ ನದಿ, ಕೃಷಿಗೆ ಸಿಗದ ನೀರು, ಅನಿಶ್ಚಿತ ಮಳೆ. ಈ ಎಲ್ಲದರ ನಡುವೆ ಅನ್ನದಾತ ಕಂಗಾಲಾಗಿದ್ದಾನೆ. ಇನ್ನು ಮುಂದೆಯಾದರೂ ವರುಣ ಕೃಪೆ ತೋರುತ್ತಾನೆಯೇ.? ಅಥವಾ ಈ ಬಾರಿಯ ಭತ್ತದ ಕೃಷಿ ಕೈ ಜಾರುತ್ತದೆಯೇ.? ಎಂಬ ಆತಂಕದಲ್ಲಿ ಕೊಡಗಿನ ರೈತ ಬದುಕು ಸಾಗಿಸುತ್ತಿದ್ದಾನೆ.