ಕುಶಾಲನಗರ, ಜು. ೨೧: ಕುಶಾಲನಗರ ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಬಡಾವಣೆ ನಿವಾಸಿಗಳೇ ಜೊತೆಗೂಡಿ ಸತ್ಕಾರ್ಯ ಹೊಸ ಗೃಹ ಮಂಡಳಿ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸುವ ಮೂಲಕ ಬಡಾವಣೆಯ ಉದ್ಯಾನವನದಲ್ಲಿ ರೂ.೩.೭೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೊಸ ಪರಿಕಲ್ಪನೆಯ ಪುಸ್ತಕಗಳ ಸಂಗ್ರಹಾಲಯವಾದ ‘ಪುಸ್ತಕ ಗೂಡು’ ಲೋಕಾರ್ಪಣೆಗೊಂಡಿತು.
ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಪುಸ್ತಕ ಗೂಡು’ ಮುಂದಿನ ದಿನಗಳಲ್ಲಿ ಜೇನುಗೂಡು ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆಯುವ ಮೂಲಕ ಮಕ್ಕಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವಂತಾಗಲಿ ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಾತನಾಡಿ, ಬಡಾವಣೆಯ ನಿವಾಸಿಗಳು ಎಲ್ಲರೂ ಸೇರಿ ವಿನೂತನವಾಗಿ ಆರಂಭಿಸಿರುವ ಪುಸ್ತಕ ಗೂಡು ಬಹಳ ಮಹತ್ಕಾರ್ಯವಾಗಿದೆ. ಪುಸ್ತಕ ಗೂಡಿನಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಪ್ರೇಮಿಗಳಾಗಿ ರೂಪುಗೊಂಡು ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ, ತಮ್ಮ ಬಡಾವಣೆ ಸೇರಿದಂತೆ ಪಟ್ಟಣದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಹೊಸ ಪರಿಕಲ್ಪನೆಯೊಂದಿಗೆ ಬಡಾವಣೆಯ ನಿವಾಸಿಗಳು ಸೇರಿ ಪುಸ್ತಕ ಗೂಡು ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಪುಸ್ತಕ ಗೂಡಿನ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯಾನವನದಲ್ಲಿ ನಿರ್ಮಿಸಿರುವ ಪುಸ್ತಕ ಗೂಡಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಹಾಗೂ ಬಡಾವಣೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಸೂಕ್ತ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಜಿ.ಬಿ.ಜಗದೀಶ್ ಮಾತನಾಡಿ, ಪುಸ್ತಕ ಗೂಡಿಗೆ ಪುಸ್ತಕದ ರಾಕ್ ಒದಗಿಸಲು ರೂ. ೨೫ ಸಾವಿರ ಧನಸಹಾಯ ಮಾಡುವುದಾಗಿ ಹೇಳಿದರು.
ಪುರಸಭೆಯ ಮಾಜಿ ಸದಸ್ಯ ಎಂ.ಕೆ. ಸುಂದರೇಶ್ ಮಾತನಾಡಿ, ಮಳೆ-ಗಾಳಿಯಿಂದ ಪುಸ್ತಕಗಳಿಗೆ ರಕ್ಷಣೆ ನೀಡಲು, ಪುಸ್ತಕ ಗೂಡಿನ ಕಟ್ಟಡದ ಸುತ್ತಲಿನ ಕಿಟಕಿಗಳಿಗೆ ರಕ್ಷಣೆ ಒದಗಿಸಲು ತಾವು ಅಗತ್ಯ ಪ್ರಮಾಣದಲ್ಲಿ ಆರ್ಥಿಕ ನೆರವು ಒದಗಿಸುವುದಾಗಿ ನುಡಿದರು.
ಪುಸ್ತಕ ಗೂಡಿನ ಪರಿಕಲ್ಪನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಕೆ.ಜಿ.ರೇಣುಕಸ್ವಾಮಿ, ಪುಸ್ತಕ ಗೂಡಿನ ಮೂಲಕ ಎಲ್ಲರಲ್ಲೂ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು. ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಉದಯಕುಮಾರ್, ಸಂಘದ ಉಪಾಧ್ಯಕ್ಷ ರುಕ್ಮಾಂಗದ, ಕಾರ್ಯದರ್ಶಿ ವಿಜೇತ ಪ್ರದೀಪ್, ನಿರ್ದೇಶಕರು ಇದ್ದರು. ಶಿಕ್ಷಕಿ ಎಂ.ತುಳಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ನಿರ್ದೇಶಕ ಎಸ್.ಎನ್.ಲೋಕೇಶ್ ಸ್ವಾಗತಿಸಿದರು. ಸಂಘದ ನಿರ್ದೇಶಕ ಟಿ.ಬಿ.ಮಂಜುನಾಥ್ ವಂದಿಸಿದರು.