ಮಡಿಕೇರಿ, ಜು. ೨೦ : ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳ ಕಡೆಗೆ ಗಮನ ಕೊಡದೆ ಓದಿನ ಕಡೆಗೆ ಆಸಕ್ತಿ ವಹಿಸಬೇಕು. ಯಾವುದೇ ಕಾರಣಕ್ಕೂ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ನಗರ ಠಾಣಾಧಿಕಾರಿ ಅನ್ನಪೂರ್ಣ ಹೇಳಿದರು.

ಇಲ್ಲಿನ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ನಾಯಕತ್ವದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವುದು ಕಂಡು ಬಂದರೆ ಅಥವಾ ರಸ್ತೆಯಲ್ಲಿ ಏನಾದರೂ ತೊಂದರೆಯಾದರೆ ಕೂಡಲೇ ಸಹಾಯವಾಣಿ ೧೧೨ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹೇಳಿದರು.

ರಸ್ತೆ ಸಂಚಾರ ನಿಯಮಗಳು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಬಳಕೆಯ ಮಹತ್ವ ಮತ್ತು ಸುರಕ್ಷಿತ ಸಂಚಾರದ ಕುರಿತು ಅವರು ಮಾಹಿತಿ ನೀಡಿದರು.

ಶಾಲೆಯ ಪ್ರಾಂಶುಪಾಲೆ ಜಾಯ್ಸ್ ವಿನಯ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಠಾಣಾಧಿಕಾರಿ ಶಿವಾನಂದ, ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ಗಳಾದ ಅಭಿಷೇಕ್, ದಿನೇಶ್, ಹಿರಿಯ ಶಿಕ್ಷಕಿ ಸುಲ್ಹತ್, ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಶೆಟ್ಟಿ, ಶಿಕ್ಷಕಿ ಸುಮತಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಹಿಮಾನಿ ಮತ್ತು ಅನಮ್ ಫಾತೀಮಾ ನಿರೂಪಿಸಿ, ಕುಮಾರಿ ಧಾರಿಣಿ ವಂದಿಸಿದರು. ವಿದ್ಯಾರ್ಥಿನಿಯರಾದ ತನ್ಯಾ ಹಾಗೂ ತನುಷ್ಕಾ ನೃತ್ಯ ಪ್ರದರ್ಶಿಸಿದರು.