ಚೆಯ್ಯAಡಾಣೆ, ಜು. ೨೦: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್‌ಎಸ್‌ಎಫ್ )ವೀರಾಜಪೇಟೆ ಡಿವಿಷನ್ ಸಾಹಿತ್ಯೋತ್ಸವ ಕಾರ್ಯಕ್ರಮ ಮಾಪಿಳ್ಳೆತೋಡುವಿನಲ್ಲಿ ನಡೆಯಿತು.

ಅಲ್ಲಿನ ಮದರಸ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ತಕ್ಕ ಮುಖ್ಯಸ್ಥರಾದ ಆಲಿ ನೆರವೇರಿಸಿದರು.

ನಂತರ ಜಮಾಅತ್ ಅಧ್ಯಕ್ಷ ಆಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು. ವೀರಾಜಪೇಟೆ ಡಿವಿಷನ್ ಒಳಪಟ್ಟ ವೀರಾಜಪೇಟೆ, ಕಡಂಗ, ಪಾಲಿಬೆಟ್ಟ, ಸಿದ್ದಾಪುರ, ಪೊನ್ನಂಪೇಟೆಯ ೫ ಸೆಕ್ಟರ್‌ನಿಂದ ೩೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದರು.

ವಿವಿಧ ಭಾಷೆಗಳಲ್ಲಿ ಭಾಷಣ, ಹಾಡು, ಕ್ಯಾಲಿಗ್ರಫಿ, ಪ್ರಬಂಧ, ಬರವಣಿಗೆ, ಕವಿತೆ ವಾಚನ, ಕವಿತೆ ಬರವಣಿಗೆ, ಕಥೆ ರಚನೆ, ಉರ್ದು ಮಂಕಾಬತ್ ಹಾಗೂ ವಿವಿಧ ಸ್ಪರ್ಧೆಗಳು ನಡೆದವು. ೧೧೭೦ ಅಂಕ ಪಡೆದು ಸಿದ್ದಾಪುರ ಸೆಕ್ಟರ್ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ೯೪೦ ಅಂಕ ಪಡೆದು ಪಾಲಿಬೆಟ್ಟ ಸೆಕ್ಟರ್ ದ್ವಿತೀಯ ಸ್ಥಾನಗಳಿಸಿ ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು. ೮೭೪ ಅಂಕ ಪಡೆದು ಕಡಂಗ ಸೆಕ್ಟರ್ ತೃತೀಯ ಸ್ಥಾನ ಪಡೆಯಿತು.

ವೀರಾಜಪೇಟೆ ಡಿವಿಷನ್ ಅಧ್ಯಕ್ಷ ತನ್ವಿರ್ ಅನ್ವಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಮಾಪಿಳ್ಳೆತೋಡು ಮಹಲ್ ಖತೀಬ್ ರಿಯಾಜ್ ಝುಹ್ರಿ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಝುಬೈರ್ ಸಅದಿ, ಹಫೀಲ್ ಅನ್ವಾರಿ, ರಾಫಿ ಹಿಮಮಿ ಕಾಮಿಲ್ ಸಖಾಫಿ, ಸ್ವಬಾಹ್ ಸಖಾಫಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಎಡತ್ತರ, ಕೋಶಾಧಿಕಾರಿ ಸ್ವಾದಿಕ್ ಅಮ್ಮತ್ತಿ, ತೌಸೀಫ್ ಅಮ್ಮತ್ತಿ, ಶಮ್ಮಾಸ್ ನೂರಾನಿ, ಅನಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತ್ಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಮ್ಮಾಸ್ ನೂರಾನಿ ಸ್ವಾಗತಿಸಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಎಡತ್ತರ ವಂದಿಸಿದರು.