ಚೆಯ್ಯಂಡಾಣೆ, ಜು. ೨೦: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣದ ಸುತ್ತಮುತ್ತ ಗ್ರಾಮಗಳಾದ ನರಿಯಂದಡ, ಕೊಕೇರಿ, ಚೇಲಾವರ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಾಗುತ್ತಿದ್ದು ಸಂಬAಧಪಟ್ಟ ಚೆಸ್ಕಾಂ ಇಲಾಖೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಕೂಡ ಹೆಚ್ಚಿದ್ದು, ಇದೀಗ ವಿದ್ಯುತ್ ಸಮಸ್ಯೆಯೂ ತಲೆದೋರಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಕೂಡ ಇದೆ. ಪ್ರವಾಸಿಗರಿಗೆ ಏನಾದರೂ ಸಮಸ್ಯೆಯಾದರೆ ಕರೆ ಮಾಡಲು ವಿದ್ಯುತ್ ಸಮಸ್ಯೆಯಿಂದ ನೆಟ್‌ವರ್ಕ್ ಇರಲ್ಲ. ಅವಘಡ ಸಂಭವಿಸಿದರೂ ಆ್ಯಂಬುಲೆನ್ಸ್ಗಳಿಗೆ ಕರೆ ಮಾಡಲು ನೆಟ್‌ವರ್ಕ್ ಸಿಗಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲು.

೩ ವರ್ಷದಿಂದ ಖಾಯಂ ಲೈನ್‌ಮ್ಯಾನ್ ಇಲ್ಲ

ಈ ವ್ಯಾಪ್ತಿಯ ನರಿಯಂದಡ, ಕೊಕೇರಿ, ಚೇಲಾವರ, ಎಡಪಾಲ, ಕರಡ ಗ್ರಾಮ ಹಾಗೂ ಚೆಯ್ಯಂಡಾಣೆ ಪಟ್ಟಣ ಒಳಗೊಂಡಿದ್ದು ನಿರಂತರ ವಿದ್ಯುತ್ ಸಮಸ್ಯೆಗೆ ಖಾಯಂ ಲೈನ್‌ಮ್ಯಾನ್ ಇಲ್ಲದಿರುವುದೇ ಸಮಸ್ಯೆಯಾಗಿದೆ. ಈ ವ್ಯಾಪ್ತಿಯಲ್ಲಿ ಹಲವಾರು ಅವಘಡ ಸಂಭವಿಸಿದರು ಕೂಡ ೩ ವರ್ಷಗಳಿಂದ ಖಾಯಂ ಲೈನ್‌ಮ್ಯಾನ್ ನಿಯೋಜಿಸುತ್ತಿಲ್ಲ. ಇಲ್ಲಿ ವಿದ್ಯುತ್ ಸಮಸ್ಯೆಯಾದರೆ ಒಂದು ವಾರ ವಿದ್ಯುತ್ ಇರಲ್ಲ.

ಆನೆ ಹಾಗೂ ಕಳ್ಳರ ಹಾವಳಿ

ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಅಧಿಕವಾಗಿದ್ದು, ರಾತ್ರಿ ವೇಳೆ ಕಾಡಾನೆಗಳು ಮನೆಯ ಅಂಗಳದಲ್ಲೇ ಇರುತ್ತವೆ. ವಿದ್ಯುತ್ ಇಲ್ಲದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಈ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದಿದ್ದರೆ ರಾತ್ರಿ ವೇಳೆ ಕಳ್ಳರ ಹಾವಳಿ ಕೂಡ ಅಧಿಕವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಮೂರ್ನಾಡು ಚೆಸ್ಕಾಂ ಅಭಿಯಂತರರು ಕೂಡಲೇ ಸ್ಪಂದಿಸಿ ಖಾಯಂ ಲೈನ್‌ಮ್ಯಾನ್ ನಿಯೋಜಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಳೆಗಾಲಕ್ಕೂ ಮುನ್ನ ಲೈನ್ ಸರಿಪಡಿಸಬೇಕಿತ್ತು

ವರ್ಷದ ಮಳೆಗಾಲ ಆರಂಭಿಸುವ ಮುನ್ನ ಚೆಸ್ಕಾಂ ಇಲಾಖೆ ಲೈನ್‌ಗಳನ್ನು ಸರಿಪಡಿಸಬೇಕು ಎಂದು ಗ್ರಾಮ ಸಭೆಯಲ್ಲೇ ಪ್ರಸ್ತಾಪಿಸಲಾಗಿತ್ತು. ಮರದ ಕೊಂಬೆಗಳನ್ನು ಕಡಿದು ಲೈನ್ ಸರಿಪಡಿಸಬೇಕು. ಮಳೆಗಾಲ ಆರಂಭವಾಗಿದೆ, ಗ್ರಾಮಸ್ಥರಿಗೆ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದನ್ನು ಕೂಡಲೇ ಇಲಾಖೆ ಪರಿಹರಿಸಬೇಕು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಥಳೀಯರೇ ನಿರ್ವಹಣೆ

ಇಲ್ಲಿ ಏನಾದರು ವಿದ್ಯುತ್ ಸಮಸ್ಯೆಯಾದರೆ ಸ್ಥಳೀಯರೇ ನಿರ್ವಹಣೆ ಮಾಡುತ್ತಾರೆ. ಲೈನ್‌ಮ್ಯಾನ್‌ಗೆ ಕರೆ ಮಾಡಿದರೆ ಡೈರಕ್ಷನ್ ಕೊಡುತ್ತಾರೆ. ಅದೇ ರೀತಿ ಸ್ಥಳೀಯರು ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಇದರಿಂದ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ?

ಕೂಡಲೇ ಸಂಬAಧಪಟ್ಟ ಚೆಸ್ಕಾಂ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲಿಗೆ ಕೂಡಲೇ ಖಾಯಂ ಲೈನ್‌ಮ್ಯಾನ್ ಅನ್ನು ನಿಯೋಜಿಸಬೇಕು. ದಿನದ ೨೪ ಗಂಟೆಯೂ ಲೈನ್‌ಮ್ಯಾನ್ ಜನರ ಸಮಸ್ಯೆ ಪರಿಹರಿಸುವಂತಿರಬೇಕು. ಚೆಸ್ಕಾಂ ಅಭಿಯಂತರರು ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕು. ರಾತ್ರಿ ವಿದ್ಯುತ್ ಸಮಸ್ಯೆಯಾಗಲು ಕಾರಣವೇನು ಎಂಬುದು ಕಂಡುಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಅಶ್ರಫ್