ಕೋವರ್‌ಕೊಲ್ಲಿ ಇಂದ್ರೇಶ್

ವೀರಾಜಪೇಟೆ, ಜು. ೨೦: ಇಲ್ಲಿಗೆ ಸಮೀಪದ ಕೇರಳ ರಾಜ್ಯದ ಕಣ್ಣೂರಿನ ಅಂಚರಕAಡಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್ ರಾಜ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಡಾ. ಎಂ.ಕೆ. ರಾಮ್ ಅವರನ್ನು ಸೋಮವಾರ ಬೆಳಿಗ್ಗೆ ಕೇರಳ ಪೊಲೀಸರ ಅಪರಾಧ ವಿಭಾಗದ ತಂಡ ಬಂಧಿಸಿದೆ. ಅವರನ್ನು ಕೊಡಗಿನ ವೀರಾಜಪೇಟೆಯಿಂದ ವಶಕ್ಕೆ ತೆಗೆದುಕೊಂಡು ನಂತರ ಕಣ್ಣೂರಿನ ಅಪರಾಧ ವಿಭಾಗದ ಕಚೇರಿಗೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ರಾಮ್ ಕರ್ನಾಟಕಕ್ಕೆ ಪ್ರವೇಶಿಸುವ ಮೊದಲು ಆಂಧ್ರಪ್ರದೇಶದ ವಿವಿಧ ಸ್ಥಳಗಳ ನಡುವೆ ಸಂಚರಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮತ್ತೊಮ್ಮೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕೊಡಗಿನಲ್ಲಿ ಅವರನ್ನು ಬಂಧಿಸಲಾಗಿದೆ. ತಮ್ಮ ಗುರುತು ಪತ್ತೆಯಾಗುವುದನ್ನು ತಪ್ಪಿಸಲು ಗಡ್ಡ ಬೆಳೆಸುವ ಮೂಲಕ ಮುಖಚಹರೆ ಬದಲಾಯಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಆರ್ಯನಾಡ್ ಬಳಿಯ ಚಲಕ್ಕಾಡ್‌ನ ಪುತುಕುಳಂಗರದ ಉಳಮಲಕ್ಕಲ್ ಮೂಲದ ದಿನಗೂಲಿ ನೌಕರ ವೈ ರಾಜನ್ ಮತ್ತು ಸಿ ಆರ್ ಲತಾ ಅವರ ಪುತ್ರ ನಿತಿನ್ ರಾಜ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಚರಕAಡಿ ಕಾಲೇಜಿನಲ್ಲಿ ಪ್ರವೇಶ ಪಡೆದು ಮೊದಲ ವರ್ಷದ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಳೆದ ಏಪ್ರಿಲ್ ೧೦ ರಂದು ದಂತ ಕಾಲೇಜಿನ ಐದನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇವರ ಆತ್ಮಹತ್ಯೆಗೆ ಡಾ. ರಾಮ್ ಹಾಗೂ ಮತ್ತೋರ್ವ ಪ್ರೊಫೆಸರ್ ಡಾ. ಸಂಗೀತ ನಂಬಿಯಾರ್ ಅವರು ಜಾತಿ ಆಧಾರಿತ ಕಿರುಕುಳ ನೀಡಿರುವುದೇ ಕಾರಣ ಎಂದು ಅವರ ಕುಟುಂಬ ಆರೋಪಿಸಿದ ಬೆನ್ನಲ್ಲೇ ಈರ್ವರ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಎಂಬ ಆರೋಪದಡಿಯಲ್ಲಿ ಕಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಇವರಿಬ್ಬರನ್ನೂ ಅಮಾನತ್ತು ಮಾಡಿದೆ.

ಕಣ್ಣೂರಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಘಟನೆಯ ಮೊದಲ ಆರೋಪಿ ಡಾ ರಾಮ್ ಮೊಬೈಲ್ ಬಳಸದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮಿಳು ನಾಡು , ಆಂಧ್ರ ಪ್ರದೇಶದ ವಿವಿಧ ಊರುಗಳ ನಡುವೆ ಓಡಾಡುತ್ತಿದ್ದರು ಎಂದು ಕಣ್ಣೂರು ಅಪರಾಧ ವಿಭಾಗದ ಎಸಿಪಿ ಸುಧೀರ್ ತಿಳಿಸಿದರು. ಆದರೆ ಇವರ ಸುಳಿವಿನ ಗುರುತು ಪತ್ತೆ ಮಾಡಿದ ಪೊಲೀಸರ ತಂಡ ಇಂದು ಬೆಳಗಿನ ಜಾವ ವೀರಾಜಪೇಟೆ ಹೊರವಲಯದಲ್ಲಿ ವಶಕ್ಕೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು. ಆಂಧ್ರ ಮೂಲದ ಇವರು ಎರಡು ದಿನಗಳಿಂದ ವೀರಾಜಪೇಟೆಯ ಹೊಟೇಲ್ ಒಂದರಲ್ಲಿ ತಂಗಿದ್ದು ಇಂದು ಬೇರೆಡೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದರು.

ಕಳೆದ ಜೂನ್ ೧೯ ರಂದು ಕೇರಳ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಸುಪ್ರೀಂ ಕೋರ್ಟ್ ರಾಮ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ರಾಮ್‌ಗಾಗಿ ಹುಡುಕಾಟ ಚುರುಕುಗೊಂಡಿತು. ಹೈಕೋರ್ಟ್ ಆದೇಶದ ನಂತರ ಅವರನ್ನು ಬಂಧಿಸಲು ಅಪರಾಧ ವಿಭಾಗದ ತಂಡ ಮೂರು ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿತ್ತು. ಮತ್ತೋರ್ವ ಆರೋಪಿಯೂ ಆಗಿರುವ ಡಾ. ಸಂಗೀತ ನಂಬಿಯಾರ್ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಆದರೆ ಅತ್ಮಹತ್ಯೆಗೆ ಜಾತಿ ನಿಂದನೆ ಕಾರಣವಲ್ಲ , ತನ್ನ ತಾಯಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಮೃತ ನಿತಿನ್ ಆ್ಯಪ್ ಒಂದರಿAದ ೧೫ ಸಾವಿರ ರೂಪಾಯಿ ಸಾಲ ಪಡೆದಿದ್ದ. ಸಾಲ ಹಿಂತಿರುಗಿಸದಿದ್ದಾಗ ಆ್ಯಪ್ ಕಂಪೆನಿ ಕಾಲೇಜಿನ ಲೆಕ್ಚರರ್ ಹಾಗೂ ಪರಿಚಿತರಿಗೆಲ್ಲಾ ಮೆಸೇಜ್ ಕಳಿಸಿತ್ತು. ಈ ಕಾರಣದಿಂದಲೇ ಅವಮಾನ ಹಾಗೂ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬAಧ ಪೊಲೀಸರು ನೋಯ್ಡಾ ಮೂಲದ ನಾಲ್ವರನ್ನು ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಿದ್ದಾರೆ.