ಬೆಂಗಳೂರು, ಜು. ೧೮: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ (೮೯) ಅವರು ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆ ಹಾಗೂ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ೪ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಂಜೆ ೪.೫೦ರ ಸುಮಾರಿಗೆ ಹೃದಯ ಸ್ತಂಭನದಿAದ ನಿಧನರಾಗಿದ್ದಾರೆ.

ಚನ್ನಮ್ಮ ಅವರ ಆರೋಗ್ಯ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಶಾಸಕ ಹೆಚ್.ಡಿ. ರೇವಣ್ಣ ಹಾಗೂ ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬ ಆಸ್ಪತ್ರೆಗೆ ಧಾವಿಸಿತ್ತು. ಪತ್ನಿಯ ನಿಧನದಿಂದಾಗಿ ೯೩ ವರ್ಷದ ಹಿರಿಯ ನಾಯಕ ದೇವೇಗೌಡರು ತೀವ್ರ ಭಾವುಕರಾಗಿದ್ದಾರೆ.

ರಾಜಕೀಯದ ಏಳುಬೀಳುಗಳ ನಡುವೆಯೂ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ ಹೆಗ್ಗಳಿಕೆ ಚೆನ್ನಮ್ಮ ಅವರದ್ದಾಗಿತ್ತು. ಸುಮಾರು ೨೫ ವರ್ಷಗಳ ಹಿಂದೆ ಅವರ ಮೇಲೆ ಭೀಕರ ಆಸಿಡ್ ದಾಳಿ ನಡೆದಿದ್ದಾಗಲೂ, ಅವರು ಧೃತಿಗೆಡದೆ ಬದುಕುಳಿದು ಬಂದ ಗಟ್ಟಿಗಿತ್ತಿಯಾಗಿದ್ದರು. ತಾಯಿಯ ಅತಿಯಾದ ದೈವಭಕ್ತಿ ಮತ್ತು ಪ್ರಾರ್ಥನೆಗಳೇ ಈ ಹಿಂದಿನ ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಿತ್ತು ಎಂದು ಹೆಚ್.ಡಿ. ಕುಮಾರಸ್ವಾಮಿ ನೆನೆದಿದ್ದಾರೆ. ಚನ್ನಮ್ಮ ಅವರ ನಿಧನಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕಾಂಗ್ರೆಸ್ ಮುಖಂಡ, ಕರ್ನಾಟಕ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.