ಐಗೂರು, ಜು. ೧೮: ಐಗೂರು ಗ್ರಾಮದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ಮಂತರ್ ಗೌಡ ಪರಿಶೀಲಿಸಿದರು.

ಈ ಸಂದರ್ಭ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕಾಜೂರು ಪರ್ಯಾಯ ರಸ್ತೆ ಹದಗೆಟ್ಟಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು.

ಅಲ್ಲದೆ ನೂತನ ಸೇತುವೆ ನಿರ್ಮಾಣದ ವೇಳೆ ಇತಿಹಾಸ ಪ್ರಸಿದ್ಧ ಬ್ರಿಟಿಷರ ಕಾಲದ ಕಬ್ಬಿಣ ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸದೆ ಸಂರಕ್ಷಿಸಬೇಕಾಗಿತ್ತು ಎಂದು ಗ್ರಾಮಸ್ಥ ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹಳೆಯ ಕಬ್ಬಿಣ ಸೇತುವೆಯ ಪಳೆಯುಳಿಕೆಗಳನ್ನು ಸಂಗ್ರಹಿಸಿ ನೂತನ ಸೇತುವೆ ಪಕ್ಕದಲ್ಲಿ ಅದರ ಇತಿಹಾಸವನ್ನು ಪರಿಚಯಿಸುವ ವೀಕ್ಷಣಾ ಮಾದರಿ ನಿರ್ಮಿಸಿ, ಕಬ್ಬಿಣ ಸೇತುವೆಯ ನೆನಪನ್ನು ಉಳಿಸಲಾಗುವುದು ಎಂದರು.

ಕಾಮಗಾರಿಯ ಗುಣಮಟ್ಟದ ಕುರಿತು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಅಭಿಯಂತರ ವಿಜಯಕುಮಾರ್ ಅವರಿಗೆ ಸೂಚನೆ ನೀಡಿದ ಅವರು, ಸೇತುವೆ ರಸ್ತೆಯಲ್ಲಿ ಅಳವಡಿಸಲಿರುವ ರೇಡಿಯಮ್ ಸೂಚನಾ ಫಲಕಗಳು ವಾಹನ ಸವಾರರಿಗೆ ಗೋಚರಿಸುವಂತೆ ಎತ್ತರದಲ್ಲಿ ನಿರ್ಮಿಸಬೇಕು. ಈಗಿರುವ ತಾತ್ಕಾಲಿಕ ಪಾದಚಾರಿಗಳ ಮಾರ್ಗದಲ್ಲಿ ಜಾರಿಬೀಳದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸೇತುವೆಯ ಎರಡು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಮಣ್ಣು ತುಂಬಿಸಿ ಕಾಮಗಾರಿಯ ಗುಣಮಟ್ಟ ಕಾಪಾಡುವುದರೊಂದಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಸಬಿತಾ ಚೆನ್ನಕೇಶವ, ಮಚ್ಚಂಡ ಅಶೋಕ್, ದಿನೇಶ್, ರಮೇಶ್ ಇತರರಿದ್ದರು.