ವೀರಾಜಪೇಟೆ, ಜು. ೧೮: ಕರಾವಳಿ ಮತ್ತು ಮಲೆನಾಡಿನ ಜನರ ಆರಾಧ್ಯ ದೈವವಾದ ಶ್ರೀ ಮಾರಿಯಮ್ಮ ದೇವಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಆಟಿ ಮಾಸಕ್ಕೆ ಚಾಲನೆ ಸಿಕ್ಕಿದೆ. ಆಟಿ ಮಾಸದ ಮೊದಲ ದಿನವಾದ ಶುಕ್ರವಾರ ವೀರಾಜಪೇಟೆ ನಗರದಲ್ಲಿರುವ ಪ್ರಸಿದ್ಧ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ವಿಜೃಂಭಣೆಯಿAದ ನೆರವೇರಿದವು.

ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ದೇವಾಲಯಕ್ಕೆ ಆಗಮಿಸಿದರು. ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಶ್ರೀ ದಕ್ಷಿಣ ಮಾರಿಯಮ್ಮನ ಮೂರ್ತಿಯನ್ನು ಬಣ್ಣ ಬಣ್ಣದ ಮಲ್ಲಿಗೆ, ಗುಲಾಬಿ, ಚೆಂಡು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು

ಆಟಿ ತಿಂಗಳ ಪೂರ್ತಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಕುಂಕುಮಾರ್ಚನೆ, ಸೇವೆ ನಡೆಯಲಿದೆ. ಮೊದಲ ದಿನದಂದು ಅಮ್ಮನಿಗೆ ನೈವೇದ್ಯವಾಗಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು ಮತ್ತು ವಿಶೇಷ ಪ್ರಸಾದವಾದ ರಾಗಿ ಕೂಳು ಅರ್ಪಿಸಲಾಯಿತು.

ಬೆಳಗ್ಗೆಯಿಂದ ಸಂಜೆಯವರೆಗೆ ದೇವಾಲಯದಲ್ಲಿ ಭಕ್ತರ ದಟ್ಟಣೆ ಇತ್ತು. ಮಹಿಳೆಯರು ಹೊಸ ಸೀರೆ ಉಟ್ಟು, ಕುಂಕುಮ ಇಟ್ಟು ಅಮ್ಮನಿಗೆ ಹರಕೆ ಸಲ್ಲಿಸಿದರು. ಆಟಿ ತಿಂಗಳಲ್ಲಿ ಅಮ್ಮನನ್ನು ಪೂಜಿಸಿದರೆ ಮನೆಯಲ್ಲಿ ರೋಗ-ಬಾಧೆ ಹೋಗುತ್ತದೆ. ಬೆಳೆ ಚೆನ್ನಾಗಿ ಬರುತ್ತದೆ ಎಂದು ಬಂದಿದ್ದ ಹಿರಿಯ ಭಕ್ತೆಯೊಬ್ಬರು ತಿಳಿಸಿದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಬಂದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಿಸಲಾಯಿತು. ಆಟಿ ತಿಂಗಳ ಪ್ರತಿ ಶುಕ್ರವಾರ ವಿಶೇಷ ಅಲಂಕಾರ, ಪೂಜೆಗಳು ನಡೆಯಲಿದೆ ಮತ್ತು ಅನ್ನಸಂತರ್ಪಣೆ ಇರುತ್ತದೆ.