ವೀರಾಜಪೇಟೆ, ಜು. ೧೮: ವೀರಾಜಪೇಟೆ ಸಮೀಪದ ಗೌರಿಕೆರೆ ಪ್ರದೇಶದಲ್ಲಿ ಅಕ್ರಮ ಕಾಮಗಾರಿಯಿಂದ ಬೃಹತ್ ತಡೆಗೋಡೆ ಕುಸಿದು ಸ್ಥಳೀಯ ನಿವಾಸಿಯೊಬ್ಬರ ಮನೆ ಅಪಾಯದ ಅಂಚಿನಲ್ಲಿದ್ದು, ಘಟನೆ ನಡೆದು ೨೦ ದಿನಗಳಾದರೂ ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ಎಂ.ಪಿ. ಸುಜಾ ಕುಶಾಲಪ್ಪ ಅವರು ಪರಿಸ್ಥಿತಿ ಪರಿಶೀಲಿಸಿ ಅಧಿಕಾರಿಗಳ ನಿರ್ಲಕ್ಷö್ಯವನ್ನು ತೀವ್ರವಾಗಿ ಖಂಡಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ವೀರಾಜಪೇಟೆ ತಹಶೀಲ್ದಾರ್ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸ್ಥಳೀಯ ನಿವಾಸಿ ಶಾಲಿನಿ ಅವರು ಕೆಲವು ತಿಂಗಳು ಹೊರಗಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಪಕ್ಕದ ಜಾಗದ ಮಾಲೀಕರು ಯಾವುದೇ ಮುನ್ಸೂಚನೆ ಅಥವಾ ಅಗತ್ಯ ಅನುಮತಿ ಪಡೆಯದೆ ಯಂತ್ರಗಳ ಮೂಲಕ ಬಂಡೆ ಕೊರೆದು ಸ್ಫೋಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ಶಾಲಿನಿ ಅವರ ಮನೆಯ ಹಿಂಭಾಗದಲ್ಲಿದ್ದ ಬೃಹತ್ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಬಂಡೆ ಸ್ಫೋಟದಿಂದ ಅಗೆದಿರುವ ಪ್ರದೇಶದಲ್ಲಿ ನೀರು ತುಂಬಿಕೊAಡು ಕೃತಕ ಕೆರೆಯಂತಾಗಿದ್ದು, ತಡೆಗೋಡೆ ಕುಸಿತದಿಂದ ಮನೆಯ ಹಿಂಭಾಗದ ಮಣ್ಣು ಸಡಿಲಗೊಂಡಿದೆ. ಮಳೆಗಾಲದಲ್ಲಿ ಮತ್ತಷ್ಟು ಮಳೆ ಸುರಿದರೆ ಮನೆ ಕುಸಿಯುವ ಅಪಾಯ ಎದುರಾಗಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲೂ ಆತಂಕ ಮನೆಮಾಡಿದೆ. ಸಂತ್ರಸ್ತೆ ಶಾಲಿನಿ ಮಾತನಾಡಿ, ಊರಿಗೆ ಮರಳಿದ ಬಳಿಕ ಈ ಪರಿಸ್ಥಿತಿ ಕಂಡು ಬೆಚ್ಚಿಬಿದ್ದಿದ್ದೇವೆ. ಮಳೆ ಬಂದಾಗಲೆಲ್ಲಾ ಭಯದಿಂದ ದಿನ ಕಳೆಯುವಂತಾಗಿದೆ. ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡುವ ಸ್ಥಿತಿಯಿಲ್ಲ. ಇದುವರೆಗೂ ಯಾವುದೇ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲು ಬಂದಿಲ್ಲ ಎಂದು ಅಳಲು ತೋಡಿಕೊಂಡರು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಕೊಡಗಿನಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಇಂತಹ ಅಕ್ರಮ ಕಾಮಗಾರಿಗಳು ಭೂಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೆರೆಯ ವಯನಾಡ್‌ನಲ್ಲಿ ಸಂಭವಿಸಿದAತಹ ದುರಂತಗಳು ಕೊಡಗಿನಲ್ಲಿ ಮರುಕಳಿಸಬಾರದು. ಒಂದು ವೇಳೆ ಜೀವಹಾನಿ ಅಥವಾ ಆಸ್ತಿಹಾನಿ ಸಂಭವಿಸಿದರೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಅಕ್ರಮ ಕಾಮಗಾರಿ ನಡೆಸಿದವರೇ ಹೊಣೆಗಾರರು ಎಂದು ಎಚ್ಚರಿಸಿದರು. ಸ್ಥಳ ಪರಿಶೀಲನೆ ವೇಳೆ ಸುರೇಶ್, ಪ್ರದೀಪ್ ರೈ, ಸ್ಥಳೀಯ ನಿವಾಸಿ ಸಂತೋಷ್, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ಹಾಗೂ ಬಿಜೆಪಿ ಹಿರಿಯ ಮುಖಂಡ ಪಟ್ರಪಂಡ ರಘು ನಾಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.