ಫಿಫಾ ಫುಟ್ಬಾಲ್ ವಿಶ್ವಕಪ್ ಈಗ ಅಂತಿಮ ಹಂತಕ್ಕೆ ಬಂದಿದೆ. ಜುಲೈ ಇಪ್ಪತ್ತರಂದು ಬೆಳಗಿನ ಜಾವ ೧೨.೩೦ಕ್ಕೆ ಸ್ಪೇನ್ ಮತ್ತು ಅರ್ಜೆಂಟಿನಾ ತಂಡಗಳ ನಡುವೆ ಫೈನಲ್ ನಡೆಯಲಿದೆ. ಎರಡೂ ಬಲಾಢ್ಯ ತಂಡಗಳಾಗಿದ್ದು ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಶೃಂಗ ತಲುಪಿದೆ. ಈ ಫೈನಲ್ ಪಂದ್ಯವನ್ನು ದಕ್ಷಿಣ ಅಮೆರಿಕಾ ಮತ್ತು ಯೂರೋಪ್ ಖಂಡಗಳ ನಡುವಿನ ಫೈನಲ್ ಎಂದೂ ಬಣ್ಣಿಸಲಾಗುತ್ತಿದೆ.

ಈ ವಿಶ್ವಕಪ್ ಹಲವಾರು ಕಾರಣಗಳಿಂದಾಗಿ ವಿಶೇಷವಾಗಿತ್ತು. ಈ ಬಾರಿ ನಲವತ್ತೆಂಟು ತಂಡಗಳಿಗೆ ಅವಕಾಶ ಮಾಡಿಕೊಟ್ಟಿದ್ದ ಕಾರಣ ಒಟ್ಟು ಪಂದ್ಯಗಳ ಸಂಖ್ಯೆ ನೂರಾನಾಲ್ಕಕ್ಕೆ ಏರಿಕೆಯಾಗಿತ್ತು. ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ಸೇರಿ ಈ ವಿಶ್ವಕಪ್ ಆಯೋಜಿಸಿದ್ದವು. ಈ ರಾಷ್ಟ್ರಗಳಲ್ಲಿ ಫುಟ್ಬಾಲ್ ಗೆ ಬೇಕಾದ ಮೂಲ ಸೌಕರ್ಯಗಳು ಮೊದಲೇ ಇದ್ದ ಕಾರಣ ಆಯೋಜನೆಯ ಖರ್ಚೂ ಕಡಿಮೆಯಾಗಿತ್ತು ಎಂಬುದು ಗಮನಾರ್ಹ.

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದ, ಜರ್ಮನಿ, ನೆದರ್ಲ್ಯಾಂಡ್, ಪೋರ್ಚುಗಲ್, ಬ್ರೆಜಿಲ್, ಮೊದಲಾದ ತಂಡಗಳು ಕ್ವಾರ್ಟರ್ ಫೈನಲ್‌ಗೂ ಮೊದಲೇ ಆಟವನ್ನು ಮುಗಿಸಿ ವಿಶ್ವಕಪ್‌ಗೆ ನಮಸ್ಕಾರ ಹೇಳಿದವು. ಪ್ರಬಲ ತಂಡಗಳಾಗಿದ್ದ ಫ್ರಾನ್ಸ್ ಮತ್ತು ಇಂಗ್ಲೆAಡ್ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದವು.

ಈ ಸಲದ ವಿಶ್ವಕಪ್, ಹಲವು ತಾರಾ ಆಟಗಾರರ ಫುಟ್ಬಾಲ್ ಬದುಕಿನ ಕೊನೆಯ ಆಟಕ್ಕೆ ಸಾಕ್ಷಿಯಾಯ್ತು. ಬ್ರೆಜಿಲ್ ತಂಡದ ನೇಮರ್, ಪೋರ್ಚುಗಲ್ ತಂಡದ ಕ್ರಿಸ್ಟಿಯಾನೋ ರೊನಾಲ್ಡೋ ಮೊದಲಾದ ತಾರಾ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಎಂಬ ಸೂಚನೆ ಲಭ್ಯವಾಗಿದೆ. ಅಂತಾರಾಷ್ಟಿçÃಯ ಪಂದ್ಯಗಳಲ್ಲಿ ಅತಿಹೆಚ್ಚು ಗೋಲುಗಳನ್ನು ದಾಖಲಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಬದುಕಿನಲ್ಲಿ ವಿಶ್ವಕಪ್ ಗೆಲ್ಲಲಾಗಲಿಲ್ಲ ಎಂಬ ಕೊರಗು ಇದ್ದೇ ಇರುತ್ತದೆ. ಹಾಗೆಯೇ ಬ್ರೆಜಿಲ್ ನ ನೇಮರ್ ಗೂ ಕೂಡ.

ಅರ್ಜೆಂಟಿನಾದ ತಾರಾ ಆಟಗಾರ ಲಿಯೋನೆಲ್ ಮೆಸ್ಸಿ ಅಕ್ಷರಶಃ ಫುಟ್ಬಾಲ್ ದಂತಕತೆಯಾದರು. ವಿಶ್ವಕಪ್ ಪಂದ್ಯಾವಳಿಗಳಲ್ಲಿ ಇಪ್ಪತ್ತೊಂದು ಗೋಲುಗಳನ್ನು ಗಳಿಸಿ ಜರ್ಮನಿಯ ಮಿರೋ ಸ್ಲೋವ್ ದಾಖಲೆ ಮುರಿದರು. ಫ್ರಾನ್ಸ್ ತಂಡದ ಕಿಲಿಯಾನ್ ಎಂಬಾಪ್ಪೆ ಕೂಡ ಮೆಸ್ಸಿಯ ಹಿಂದೆಯೇ ಇದ್ದು ೨೦ ಗೋಲುಗಳನ್ನು ಗಳಿಸಿದ್ದಾರೆ. ಎಂಬಾಪ್ಪೆ ಇನ್ನೆರಡು ಅಥವಾ ಮೂರು ವಿಶ್ವಕಪ್ ಆಡುವ ಸಾಧ್ಯತೆ ಇದ್ದು ಮೆಸ್ಸಿಯ ದಾಖಲೆಯನ್ನೂ ಮುರಿಯಬಹುದು. ವಿಶ್ವಕಪ್ ಆರಂಭ ದಿಂದಲೂ ಮೆಸ್ಸಿ, ಎಂಬಾಪ್ಪೇ, ನಾರ್ವೆಯ ಎರ್ಲಿಂಗ್ ಹಾಲೆಂಡ್ ಪೈಪೋಟಿಗೆ ಬಿದ್ದವರಂತೆ ಗೋಲುಗಳಿಸಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿದ್ದರು.

ಈ ವಿಶ್ವಕಪ್ ನಲ್ಲಿ, ಕೇವಲ ಐದು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೇಪ್ ವೆರ್ಡೆ ತಂಡ ಅಮೋಘವಾದ ಆಟವನ್ನು ಪ್ರದರ್ಶಿಸಿತು. ವಿಶ್ವಕಪ್ ಹಾಲಿ ಚಾಂಪಿಯನ್ ಅರ್ಜೆಂಟಿನಾ ವಿರುದ್ಧ ಪ್ರದರ್ಶಿಸಿದ ಆಟವನ್ನು ಇಡೀ ಜಗತ್ತನ್ನು ಸೂಜಿಗಲ್ಲಿನಂತೆ ಆಕರ್ಷಿಸಿತ್ತು. ಆ ತಂಡದ ಗೋಲ್ ಕೀಪರ್ ನಲ್ವತ್ತೊಂದು ವರ್ಷದ ವೊಝಿನ್ಹಾ ಅವರಂತೂ ಈ ವಿಶ್ವಕಪ್ ನಿಂದಾಗಿ ಸೂಪರ್ ಸ್ಟಾರ್ ಪಟ್ಟಕ್ಕೇರಿದರು ಎಂದರೂ ತಪ್ಪಲ್ಲ. ಪ್ರಿ ಕ್ವಾರ್ಟರ್ ನಲ್ಲಿ ಜಪಾನ್ ತಂಡ ಬ್ರೆಜಿಲ್ ಎದುರು ಪ್ರದರ್ಶಿಸಿದ ಆಟ ಮರೆಯಲಾಗದ್ದು. ಅತಿಥೇಯ ರಾಷ್ಟ್ರಗಳಾದ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ಅತ್ಯುತ್ತಮ ಆಟ ಪ್ರದರ್ಶಿಸಿದರೂ ಕ್ವಾರ್ಟರ್ ಫೈನಲ್ ತಲುಪುವಲ್ಲಿ ವಿಫಲವಾದವು.

ನಾರ್ವೆ ತಂಡದ ಎರ್ಲಿಂಗ್ ಹಾಲೆಂಡ್ ಅವರ ಆಟ ಅಮೋಘವಾಗಿತ್ತು. ಚೆಂಡಿನ ಮೇಲಿನ ನಿಯಂತ್ರಣ ಮತ್ತು ವೇಗಕ್ಕೆ ಸಾಟಿಯೇ ಇರಲಿಲ್ಲ. ಇಂಗ್ಲೆAಡ್ ನ ಹ್ಯಾರಿ ಕೇನ್ ಮತ್ತು ಬೆಲ್ಲಿಂಗಮ್, ಬ್ರೆಜಿಲ್ ನ ವಿನ್ಸೆಂಟ್ ಜೂನಿಯರ್, ಸೆನೆಗಲ್ ನ ಇಸ್ಮೈಲಾ ಸಾರ್, ಮೆಕ್ಸಿಕೋದ ಜೂಲಿಯನ್ ಕ್ವೆನೋನಾಸ್, ಸ್ಪೇನ್‌ನ ಯೆಮಾಲ್ ಮೊದಲಾದವರ ಆಟ ವೀಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಲಿಯೋನೆಲ್ ಮೆಸ್ಸಿ ಆಲ್ಜೀರಿಯಾ ವಿರುದ್ಧ, ಫ್ರಾನ್ಸ್ನ ಓಸ್ಮಾನ್ ಡೆಂಬೆಲೆ ನಾರ್ವೆಯ ವಿರುದ್ಧ, ಕೆನಡ ತಂಡದ ಜೋನಾಥನ್ ಡೇವಿಡ್ ಕತಾರ್ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಕೆಯ ಸಾಧನೆಯನ್ನೂ ಮಾಡಿದರು.

ಖ್ಯಾತ ನಾಮರ ತಂಡಗಳು ಹೊರ ಹೋದಾಗ ಒಂದAತೂ ಸ್ಪಷ್ಟವಾಗುತ್ತದೆ. ಆಟಕ್ಕೆ ಬೇಕಾದದ್ದು ತಂಡದ ಪ್ರಯತ್ನ. ವೈಯಕ್ತಿಕ ಆಟ, ಪ್ರಶಸ್ತಿ ಗೆಲ್ಲಲು ಸಾಕಾಗದು.

ಈ ವಿಶ್ವಕಪ್ ನಲ್ಲಿ ವಿವಾದಗಳೂ ಇದ್ದವು. ಇರಾನ್ ತಂಡಕ್ಕೆ ಅಮೆರಿಕಾದಲ್ಲಿ ಆಟ ಇದ್ದಾಗ, ಆಟ ಮುಗಿಸಿ ತಕ್ಷಣ ವಾಪಸ್ ತೆರಳಲು ತಿಳಿಸಿದ್ದು, ಅರ್ಜೆಂಟಿನಾ ಮತ್ತು ಈಜಿಪ್ಟ್ ತಂಡಗಳ ನಡುವಿನ ಆಟದಲ್ಲಿ ಫೌಲ್ ನೀಡಿದ ವಿವಾದ, ಮೊರಾಕ್ಕೊ ತಂಡ ಫ್ರಾನ್ಸ್ ವಿರುದ್ಧ ಸೋತಾಗ ಫ್ರಾನ್ಸ್ ನಲ್ಲಿ ಸಂಭವಿಸಿದ ಹಿಂಸಾಚಾರ, ಅಮೆರಿಕಾದ ಆಟಗಾರನಿಗೆ ರೆಡ್ ಕಾರ್ಡ್ ನೀಡಿ ಒಂದು ಪಂದ್ಯ ನಿಷೇಧ ನೀಡಿದಾಗ, ಅಮೆರಿಕಾದ ಅಧ್ಯಕ್ಷರು ಫಿಫಾ ಅಧ್ಯಕ್ಷರಿಗೆ ಕರೆಮಾಡಿ ನಿಷೇಧ ರದ್ದುಗೊಳಿಸಲು ಕಾರಣರಾಗಿ, ಅದನ್ನು ಹೇಳಿಕೊಂಡದ್ದು, ಸೊಮಾಲಿಯಾ ದೇಶದ ಫಿಫಾದ ಅರ್ಹ ರೆಫ್ರಿಯೊಬ್ಬರಿಗೆ ಅಮೆರಿಕಾದ ವೀಸಾ ನಿರಾಕರಿಸಿದ್ದು, ವಿಶ್ವಕಪ್ ಪಂದ್ಯಾವಳಿಯ ಟಿಕೆಟ್ ಬೆಲೆಗಳನ್ನು ವಿಪರೀತವಾಗಿ ಹೆಚ್ಚಿಸಿದ್ದು....ಹೀಗೆ ಒಂದಷ್ಟು ವಿವಾದಗಳೂ ಬಿಸಿ ಬಿಸಿ ಚರ್ಚೆಗೆ ಕಾರಣವಾದವು. ಅಮೆರಿಕಾ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭ್ಯವಾಗದಿದ್ದಾಗ, ಫಿಫಾ ವೇ ಶಾಂತಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಅಮೆರಿಕಾ ಅಧ್ಯಕ್ಷರಿಗೆ ನೀಡಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಇಷ್ಟೆಲ್ಲಾ ವಿವಾದಗಳ ನಡುವೆಯೂ ವಿಶ್ವಕಪ್ ಯಶಸ್ವಿಯಾಗಿ ನಡೆದಿದ್ದು ಈಗ ಹೈವೋಲ್ಟೇಜ್ ಅಂತಿಮ ಪಂದ್ಯ ಉಳಿದಿದೆ.

೨೦೩೦ ಕ್ಕೆ ಫಿಫಾ ವಿಶ್ವಕಪ್ ಹುಟ್ಟಿ ಸರಿಯಾಗಿ ಒಂದು ಶತಮಾನವಾಗುತ್ತದೆ.

ಬರುವ ಸಲದ ವಿಶ್ವಕಪ್ ಪಂದ್ಯಾವಳಿಯನ್ನು ಮೊರಾಕ್ಕೊ ಪೋರ್ಚುಗಲ್ ಮತ್ತು ಸ್ಪೇನ್ ರಾಷ್ಟ್ರಗಳು ಜಂಟಿಯಾಗಿ ಆಯೋಜಿಸುತ್ತಿವೆ. ಅಷ್ಟು ಮಾತ್ರವಲ್ಲ ಶತಮಾನೋತ್ಸವದ ನೆನಪಿಗಾಗಿ ಅರ್ಜೆಂಟಿನಾ ಪೆರುಗ್ವೆ ಮತ್ತು ಉರುಗ್ವೆ ರಾಷ್ಟ್ರಗಳೂ ಕೆಲವು ಪಂದ್ಯಗಳನ್ನು ಆಯೋಜಿಸುತ್ತಿವೆ.

ಹಾಗಾಗಿ ಒಟ್ಟು ಅತಿಥೇಯ ರಾಷ್ಟ್ರಗಳ ಸಂಖ್ಯೆ ಆರು. ಇದೂ ಒಂದು ದಾಖಲೆಯಾಗಲಿದೆ. ಬರುವ ಸಲ ಅರವತ್ನಾಲ್ಕು ತಂಡಗಳನ್ನು ಭಾಗವಹಿಸುವಂತೆ ಮಾಡುವ ಸಾಧ್ಯತೆ ಇದೆ. ಅದಕ್ಕೆ ನಾವಿನ್ನೂ ನಾಲ್ಕು ವರ್ಷ ಕಾಯಬೇಕಿದೆ.

ಇರಲಿ. ಈಗ ವಿಶ್ವಕಪ್ ಫೈನಲ್ ಪಂದ್ಯ ಬಾಕಿ ಉಳಿದಿದ್ದು ಚಾಂಪಿಯನ್ ಯಾರಾಗುತ್ತಾರೆ ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಅಂಶ.