ವೀರಾಜಪೇಟೆ, ಜು. ೧೭: ಪತ್ನಿಯ ಮೇಲೆ ಮಾರಕಾಸ್ತçದಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಿಗೆ ವೀರಾಜಪೇಟೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ೬ ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ವೀರಾಜಪೇಟೆಯ ವಿದ್ಯಾನಗರ ನಿವಾಸಿ ಎಂ.ಎ. ಮುನೀರ್ (೪೨) ಶಿಕ್ಷೆಗೆ ಗುರಿಯಾದ ಆರೋಪಿ.
ಮುನೀರ್ ತನ್ನ ಪತ್ನಿ ಜಾಕೀರಾ (೨೯) ಅವರೊಂದಿಗೆ ೨೦೨೦ರ ಡಿಸೆಂಬರ್ ೨೦ರಂದು ಬೆಳಿಗ್ಗೆ ಉಪಹಾರ ಸೇವಿಸುವ ವೇಳೆ ಗಲಾಟೆಯಾಗಿದೆ. ಕಲಹದ ಸಂದರ್ಭದಲ್ಲಿ ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಾಕೀರಾ ಮೊಬೈಲ್‌ನಲ್ಲಿ ಘಟನೆಯನ್ನು ಚಿತ್ರೀಕರಿಸಲು ಯತ್ನಿಸಿದಾಗ ಮುನೀರ್ ಮೊಬೈಲ್ ಕಸಿದು ಎಸೆದಿದ್ದಾನೆ. ಬಳಿಕ ಮನೆಯಲ್ಲಿದ್ದ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದು, ಅದನ್ನು ತಡೆಯಲು ಯತ್ನಿಸಿದ ಜಾಕೀರಾಳ ಕೈಬೆರಳಿಗೆ ಗಂಭೀರ ಗಾಯವಾಗಿ ಒಂದು ಬೆರಳು ತುಂಡಾಗಿದ್ದು, ಅಧಿಕ ರಕ್ತಸ್ರಾವವಾಗಿದೆ ಎಂದು ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಅಂದಿನ ನಗರ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವೀರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್ ಅವರು ಐಪಿಸಿ ಕಲಂ ೩೨೪ರಡಿ ೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ. ೧೦ ಸಾವಿರ ದಂಡ, ಪಾವತಿಸದಿದ್ದರೆ ೨ ತಿಂಗಳ ಹೆಚ್ಚುವರಿ ಸಾದಾ ಜೈಲು ಶಿಕ್ಷೆ, ಕಲಂ ೩೨೩ರಡಿ ರೂ. ೧ ಸಾವಿರ ದಂಡ ಪಾವತಿಸದಿದ್ದರೆ ೧ ತಿಂಗಳ ಸಾದಾ ಜೈಲು ಶಿಕ್ಷೆ, ಕಲಂ ೫೦೪ರಡಿ ರೂ. ೫ ಸಾವಿರ ದಂಡ, ಪಾವತಿಸದಿದ್ದರೆ ೧ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ದಂಡದ ಮೊತ್ತವಾದ ೧೫,೦೦೦ ಅನ್ನು ಸಂತ್ರಸ್ತೆ ಜಾಕೀರಾಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಚೈತ್ರ ವಾದ ಮಂಡಿಸಿದರು.
- ಕಿಶೋರ್ ಶೆಟ್ಟಿ