*ಗೋಣಿಕೊಪ್ಪ, ಜು. ೧೭: ಪೊನ್ನಂಪೇಟೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಲೋಪಮುದ್ರಾ ಆಸ್ಪತ್ರೆ, ತಾಲೂಕು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ರಕ್ತನಿಧಿ ಘಟಕದ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪದ ಲೋಪಾಮುದ್ರಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ಲೋಪಾಮುದ್ರಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಮೃತ್ ನಾಣಯ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ವಿವಿಧ ಸಂಘಟನೆಗಳ ೫೨ ಮಂದಿ ಸದಸ್ಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಸೇವೆಯ ಮಹತ್ವವನ್ನು ಸಾರಿದರು. ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕುರುಬಯ್ಯ, "ಮಧುಮೇಹ ಇರುವವರೂ ವೈದ್ಯರ ಸಲಹೆ ಹಾಗೂ ಅಗತ್ಯ ಮಾನದಂಡಗಳನ್ನು ಪೂರೈಸಿದರೆ ರಕ್ತದಾನ ಮಾಡಬಹುದು. ಈ ಬಗ್ಗೆ ಅನಗತ್ಯ ಆತಂಕ ಬೇಡ. ಪ್ರತಿದಿನ ರಕ್ತದ ಬೇಡಿಕೆ ಹೆಚ್ಚುತ್ತಿದ್ದು, ಅದನ್ನು ಪೂರೈಸುವುದು ಸವಾಲಿನ ಕೆಲಸವಾಗಿದೆ. ಸಂಘ-ಸAಸ್ಥೆಗಳು ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದರೆ ರಕ್ತದ ಕೊರತೆಯನ್ನು ನಿವಾರಿಸಲು ಸಾಧ್ಯ. ವಾರದಲ್ಲಿ ಕನಿಷ್ಟ ಎರಡು ದಿನಗಳಾದರೂ ರಕ್ತದಾನ ಶಿಬಿರಗಳು ನಡೆದರೆ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ನೆರವಾಗುತ್ತದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು" ಎಂದು ಕರೆ ನೀಡಿದರು. ಲೋಪಾಮುದ್ರಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಮೃತ್ ನಾಣಯ್ಯ ಮಾತನಾಡಿ, "ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ರಕ್ತ ಒದಗಿಸುವುದು ಅತ್ಯಂತ ಮಹತ್ವದ ಸೇವೆಯಾಗಿದೆ. ಪ್ರಸ್ತುತ ಮಡಿಕೇರಿಯಲ್ಲಿರುವ ರಕ್ತನಿಧಿ ಘಟಕದಿಂದ ಸೇವೆ ದೊರೆಯುತ್ತಿದ್ದರೂ, ದಕ್ಷಿಣ ಕೊಡಗಿನ ಜನರ ಅನುಕೂಲಕ್ಕಾಗಿ ಗೋಣಿಕೊಪ್ಪದಲ್ಲಿಯೇ ರಕ್ತನಿಧಿ ಘಟಕ ಸ್ಥಾಪನೆಯ ಅಗತ್ಯವಿದೆ. ಲೋಪಾಮುದ್ರಾ ಆಸ್ಪತ್ರೆ ಆವರಣದಲ್ಲಿ ರಕ್ತನಿಧಿ ಘಟಕ ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ" ಎಂದು ತಿಳಿಸಿದರು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಡಾ. ಅಶಿಕ್ ಚಂಗಪ್ಪ ಮಾತನಾಡಿ, "ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಸಂಘಟನೆಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು" ಎಂದು ಹೇಳಿದರು.
ಸೀನಿಯರ್ ಚೇಂಬರ್ ರಾಷ್ಟ್ರೀಯ ಸಮಿತಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, "ಒಬ್ಬ ರಕ್ತದಾನಿಯ ದಾನದಿಂದ ಹಲವರ ಜೀವ ಉಳಿಯಬಹುದು. ರಕ್ತದಾನವು ಮಾನವೀಯ ಸೇವೆಯ ಜೊತೆಗೆ ಆರೋಗ್ಯಕರ ಜೀವನಶೈಲಿಗೂ ಸಹಕಾರಿಯಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು" ಎಂದು ಹೇಳಿದರು. ಶಿಬಿರದಲ್ಲಿ ಆಸ್ಪತ್ರೆಯ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.