ಕುಶಾಲನಗರ, ಜು. ೧೭: ಝೇಂಕಾರ್ ಮ್ಯೂಸಿಕಲ್ ಇವೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ತಿಂಗಳ ೨೧ರಂದು ಕುಶಾಲನಗರ ಕಲಾಭವನದಲ್ಲಿ ಗಾನ ಕೋಗಿಲೆ ಜಾನಕಮ್ಮ ಅವರ ಹಾಡುಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇವೆಂಟ್ ಪ್ರಮುಖರಾದ ಆರ್.ರವಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಅಂದು ಮಧ್ಯಾಹ್ನ ೩ ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಲಾವಿದರು ಸಂಗೀತ ನಿರ್ದೇಶಕರುಗಳು ಮತ್ತು ತಂಡದ ಕಲಾವಿದರುಗಳ ಮೂಲಕ ಜಾನಕಮ್ಮ ಅವರ ಹಳೆಯ ಹಾಡುಗಳನ್ನು ಪ್ರಸ್ತುತ ಪಡಿಸಲಾಗುವುದು ಎಂದರು. ಗಾನಕೋಗಿಲೆ ಜಾನಕಮ್ಮ ಅವರ ಹಾಡುಗಳ ಮೂಲಕ ನಾಡಿನಲ್ಲಿ ಸಾವಿರಾರು ಕಲಾವಿದರು ಗಾಯಕರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು. ಜಾನಕಮ್ಮ ಯಾನ ಸಂಗೀತ ಗಾನ ಎಂಬ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಮತ್ತಿತರ ಗಣ್ಯರು ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕಾರಣಕರ್ತರಾಗಬೇಕೆಂದು ರವಿ ಕೋರಿದ್ದಾರೆ. ಗೋಷ್ಠಿಯಲ್ಲಿ ಸಹ ಕಲಾವಿದರಾದ ದಿನೇಶ್, ಹರೀಶ್, ನಿತಿನ್ ಇದ್ದರು.