ಮಡಿಕೇರಿ, ಜು. ೧೭: ಮೀಸಲು ಅರಣ್ಯದಲ್ಲಿ ಕಾಡುಕೋಣವನ್ನು (ಕಾಟಿ) ಬೇಟೆಗೈದು ಮಾಂಸವಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ಇಬ್ಬರು ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದು, ೨೬೦ ಕೆಜಿ ಮಾಂಸವನ್ನು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಪೋಕ್ಲು ಮೂಲದವರು ಎನ್ನಲಾಗುತ್ತಿರುವ ಝುಬೀರ್ ಹಾಗೂ ಯಾಕೂಬ್ ಎಂಬವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಗುಂಡಿನ ಚೂರುಗಳು ತಗುಲಿರುವ ಹಿನ್ನೆಲೆ ಇಬ್ಬರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಘಟನೆ?
ಸಂಪಾಜೆ ಅರಣ್ಯ ವಲಯ ವ್ಯಾಪ್ತಿಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡುಕೋಣವನ್ನು (ಕಾಟಿ) ಬೇಟೆಯಾಡಿ ಅದನ್ನು ಮಾಂಸವಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿರುವ ಕುರಿತು ಅರಣ್ಯ ಇಲಾಖೆಗೆ ಖಚಿತ ಮಾಹಿತಿ ದೊರೆತಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕಳೆದ ರಾತ್ರಿ ೯.೩೦ರ ಸುಮಾರಿಗೆ ಕಾರ್ಯಾಚರಣೆಗಿಳಿದಿದ್ದಾರೆ.
ಬೆಟ್ಟತ್ತೂರು ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ಬಳಿ ತಪಾಸಣೆ ನಡೆಸುವ ಸಂದರ್ಭ ಜೀಪೊಂದು ಬರುತ್ತಿದ್ದಾಗ ಅದನ್ನು ತಡೆಯುವ ಪ್ರಯತ್ನವನ್ನು ಸಿಬ್ಬಂದಿ ಮಾಡಿದ್ದಾರೆ. ಆದರೆ, ವಾಹನ ನಿಲ್ಲಿಸದೆ ಸಿಬ್ಬಂದಿಯನ್ನೇ ಗುದ್ದಿಕೊಂಡು ಹೋಗುವ ಪ್ರಯತ್ನ ನಡೆದಿದೆ. ತಕ್ಷಣ ಜೀಪನ್ನು ಹಿಂಬಾಲಿಸಿಕೊAಡು ಹೋಗಿದ್ದು, ವಾಹನ ನಿಲ್ಲಿಸದೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಏರ್‌ಗನ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡುಹಾರಿಸಿದ್ದು, ಗುಂಡಿನ ಚೂರುಗಳು ಆರೋಪಿಗಳ ಮೇಲೆ ತಗುಲಿದೆ ಎನ್ನಲಾಗುತ್ತಿದೆ. ಈ ವೇಳೆ ಗಾಯಗೊಂಡು ಅಸ್ವಸ್ಥರಾದ ಜೀಪ್‌ನಲ್ಲಿದ್ದ ಇಬ್ಬರು ಪಕ್ಕದ ತೋಟದೊಳಗೆ ಓಡಿ ಅರಣ್ಯ ಇಲಾಖೆ ಸಿಬ್ಬಂದಿಯಿAದ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಹೇಂದ್ರ ಜೀಪ್ (ಕೆಎ-೧೨-ಎಂ-೫೨೧೪) ಅನ್ನು ಬೆಟ್ಟತ್ತೂರು ಬಳಿಯ ಪ್ರದೇಶದಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದು, ವಾಹನವನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ೨೬೦ ಕೆಜಿ ಕಾಟಿ ಮಾಂಸದೊAದಿಗೆ ಕಾರ್ಟ್ರಿಡ್ಜ್, ಚಾಕು, ಕೊಡಲಿ, ಕತ್ತಿ, ಅರ ಸೇರಿದಂತೆ ಬೇಟೆಗೆ ಬಳಸುವ ವಸ್ತು ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಾಂಸ ಸೇರಿದಂತೆ ಬೇಟೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ದಾಳಿಗೆ ಆರೋಪಿಗಳು ಯತ್ನಿಸಿದ್ದು, ವಾಹನ ನಿಲ್ಲಿಸದೆ ಗುದ್ದಿಕೊಂಡು ಹೋಗಿದ್ದಾರೆ. ಇದರಿಂದ ನಮ್ಮ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಸುನಿಲ್, ಆರ್‌ಎಫ್‌ಓ ಶಿವಕುಮಾರ್, ಬೀಟ್ ಸಿಬ್ಬಂದಿ ಸಚಿನ್ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಆಸ್ಪತ್ರೆಗೆ ದಾಖಲಾದ ಆರೋಪಿಗಳು
ಗುಂಡು ತಗುಲಿದ ನಂತರ ತೋಟದೊಳಗೆ ಓಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಬೆಳಗ್ಗಿನ ವೇಳೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದಾರೆ. ಈ ವೇಳೆ ಗುಂಡೇಟು ತಗುಲಿದ ಕಾರಣದಿಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಸಂದರ್ಭ ಅನುಮಾನಗೊಂಡು ವಿಚಾರಣೆ ತೀವ್ರಗೊಳಿಸಿ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಗಳ ಚಹರೆ ದೃಢೀಕರಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.