ಕರಿಕೆ, ಜು. ೧೭: ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಕೆ ಉಪಠಾಣೆಯ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್-ಜನ ಸಂಪರ್ಕ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಭಾಗಮಂಡಲ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ರಮೇಶ್, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಪೊಲೀಸ್ ಇಲಾಖೆ ಸದಾ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಭೆಯಲ್ಲಿ ಗ್ರಾಮಸ್ಥರು ಹಾಗೂ ವಾಹನ ಚಾಲಕರ ಅಹವಾಲುಗಳನ್ನು ಆಲಿಸಲಾಯಿತು. ಗ್ರಾಮದಲ್ಲಿ ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಮಾರಾಟ ಅಥವಾ ಇತರ ಅಕ್ರಮ ಚಟುವಟಿಕೆಗಳು ಕಂಡುಬAದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು, ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಆಟೋ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ವಾಹನದ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ಪೊಲೀಸ್ ಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ತೋರಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳ ಹರಡುವಿಕೆ ಹಾಗೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪೋಸ್ಟ್ಗಳನ್ನು ಪ್ರಕಟಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್, ಮಾಜಿ ಸದಸ್ಯ ನಾರಾಯಣ, ಕರಿಕೆ ಉಪ ಠಾಣೆಯ ಅಧಿಕಾರಿ ಮುಸ್ತಾಪ್, ಸಾರ್ವಜನಿಕರು, ಆಟೋ ಮಾಲೀಕರು ಹಾಗೂ ಚಾಲಕರು ಉಪಸ್ಥಿತರಿದ್ದರು.