ಕುಶಾಲನಗರ, ಜು. ೧೬: ಕುಶಾಲನಗರ ಕೊಪ್ಪ ಗಡಿ ಭಾಗದಲ್ಲಿ ಸೇತುವೆಯ ಮೇಲೆ ನಿರ್ಮಾಣಗೊಂಡ ಕಾವೇರಿ ರೋಟರಿ ಉದ್ಯಾನವನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ವೀಕ್ಷಿಸಿದರು.
ಕುಶಾಲನಗರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣಾ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿಗಳು ನಂತರ ರೋಟರಿ ಸಂಸ್ಥೆ ಪ್ರಮುಖರೊಂದಿಗೆ ಭೇಟಿ ನೀಡಿ ಉದ್ಯಾನವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘ ಸಂಸ್ಥೆಗಳು ಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಉದ್ಯಾನವನಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೈ ಜೋಡಿಸಬೇಕೆಂದು ಅವರು ಕೋರಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಕುಶಾಲನಗರ ಮಡಿಕೇರಿ ರಸ್ತೆಯ ಬದಿಯಲ್ಲಿರುವ ತಾವರೆಕೆರೆಗೆ ಸದ್ಯದಲ್ಲಿಯೇ ಕಾಯಕಲ್ಪ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಈ ಸಂದರ್ಭ ತಿಳಿಸಿದರು.
ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ತಾಲೂಕು ಕಚೇರಿ ಅಧಿಕಾರಿ ಸಂತೋಷ್, ರೋಟರಿ ನಿರ್ಗಮಿತ ಅಧ್ಯಕ್ಷರು ಹಾಗೂ ಉದ್ಯಾನವನ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದ ಮನು ಪೆಮ್ಮಯ್ಯ, ನಿರ್ಗಮಿತ ಕಾರ್ಯದರ್ಶಿ ಮಂಜುನಾಥ್, ರೋಟರಿ ಪ್ರಮುಖರಾದ ಎಸ್.ಕೆ. ಸತೀಶ್, ಎಂ.ಡಿ. ರಂಗಸ್ವಾಮಿ, ಕ್ರೆಜ್ವಲ್ ಕೋಟ್ಸ್ ಇದ್ದರು.