ಕುಶಾಲನಗರ, ಜು. ೧೬: ವಾಣಿಜ್ಯ ಮಳಿಗೆಗಳ ಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಬಳಕೆ ಆದೇಶ ಉಲ್ಲಂಘಿಸಿ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ಅಳವಡಿಸಿರುವ ಕ್ರಮ ವಿರೋಧಿಸಿ ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪುರಸಭೆ ಕಚೇರಿಗೆ ತೆರಳಿ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್ ಮತ್ತು ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಅವರನ್ನು ಸರಕಾರದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಪ್ರಶ್ನಿಸಿದರು.

ಪ್ರತಿಭಟನಾಕಾರದೊಂದಿಗೆ ಮುಖ್ಯ ರಸ್ತೆಯ ಅಂಗಡಿ ಮಳಿಗೆಯೊಂದಕ್ಕೆ ಭೇಟಿ ನೀಡಿದ ಪುರಸಭೆ ಅಧಿಕಾರಿಗಳು ಅಂಗಡಿ ಮಳಿಗೆಯಲ್ಲಿ ಅಳವಡಿಸಿದ್ದ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

ನಂತರ ಮಳಿಗೆಯ ಮಾಲೀಕರಿಗೆ ಅಧಿಕಾರಿಗಳು ಸ್ಥಳದಲ್ಲಿಯೇ ರೂ. ೫ ಸಾವಿರ ದಂಡ ವಿಧಿಸಿದರು.

ಆಂಗ್ಲ ಫಲಕಗಳನ್ನು ತೆರವುಗೊಳಿಸುವುದಾಗಿ ಅಂಗಡಿಯ ಮಾಲೀಕರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಎಸ್. ಮಣಿಕಂಠ ತಾಲೂಕು ಅಧ್ಯಕ್ಷರುಗಳಾದ ಪುಟ್ಟಸ್ವಾಮಿ, ಪ್ರವೀಣ್ ಪೂಜಾರಿ, ಗೌರವಾಧ್ಯಕ್ಷ ನಾಗರಾಜ್, ಪ್ರಮುಖರಾದ ವಿನ್ಸೆಂಟ್ ಲೋಬೋ, ಸರಳ ರಾಮಣ್ಣ, ಸೋಮೇಶ್ ಮತ್ತಿತರರು ಇದ್ದರು.