ಚೆಟ್ಟಳ್ಳಿ, ಜು. ೧೫: ನಾಗರಹೊಳೆ ಮೀಸಲು ಅರಣ್ಯ ಸಮೀಪದ ಗಿರಿಜನ ಹಾಡಿಗಳಲ್ಲಿ ಆನೆ, ಹುಲಿ, ಕರಡಿ ಸೇರಿದಂತೆ ಇತರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಆಗಮನವನ್ನು ಸೈರನ್ ಮೂಲಕ ಗ್ರಾಮಸ್ಥರಿಗೆ ಮುಂಚಿತವಾಗಿ ತಿಳಿಸುವ ವಿನೂತನ ವಿಜ್ಞಾನ ಮಾದರಿಯನ್ನು ವಿದ್ಯಾರ್ಥಿನಿಯೊಬ್ಬಳು ರೂಪಿಸಿ ಗಮನ ಸೆಳೆದಿದ್ದಾಳೆ.
ಹುಣಸೂರು ತಾಲೂಕಿನ ರತ್ನಾಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಹರಿಣಿ ವಿ., ಕುಶಾಲನಗರ ಸಮೀಪದ ಹಾರಂಗಿ ಆನೆ ಶಿಬಿರದ ಮಾವುತ ವೆಂಕಟೇಶ್ ಅವರ ಪುತ್ರಿಯಾಗಿದ್ದು, ವಿಜ್ಞಾನ ಪ್ರಾಜೆಕ್ಟ್ನಲ್ಲಿ ಕಾಡುಪ್ರಾಣಿಗಳ ಆಗಮನವನ್ನು ಪತ್ತೆಹಚ್ಚಿ ಸೈರನ್ ಮೊಳಗಿಸುವ ಮಾದರಿಯನ್ನು ಪ್ರದರ್ಶಿಸಿದ್ದಾಳೆ.
ಈ ಯೋಜನೆಯ ಉದ್ದೇಶ ನಾಗರಹೊಳೆ ಮೀಸಲು ಅರಣ್ಯದ ಸಮೀಪದ ಗಿರಿಜನ ಹಾಡಿಗಳಲ್ಲಿ ಕಾಡುಪ್ರಾಣಿಗಳು ಪ್ರವೇಶಿಸಿದಾಗ ಸೈರನ್ ಮೊಳಗಿಸಿ ಗ್ರಾಮಸ್ಥರನ್ನು ಎಚ್ಚರಿಸುವುದಾಗಿದೆ. ಇದರಿಂದ ಜನರು ಮುನ್ನೆಚ್ಚರಿಕೆ ವಹಿಸಿ ಜೀವಹಾನಿ ಹಾಗೂ ಮಾನವ - ವನ್ಯಜೀವಿ ಸಂಘರ್ಷವನ್ನು ಕಡಿಮೆಮಾಡಬಹುದು ಎಂಬ ಸಂದೇಶವನ್ನು ಈ ಯೋಜನೆ ನೀಡುತ್ತದೆ. ಹರಿಣಿಯ ಈ ವಿನೂತನ ವಿಜ್ಞಾನ ಪ್ರಾಜೆಕ್ಟ್ಗೆ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಲಭಿಸಿದ್ದು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. - ಕರುಣ್ ಕಾಳಯ್ಯ