ಕಡಂಗ, ಜು. ೧೫: ಮಳೆಗಾಲ ಬಂದರೆ ಕೊಡಗು ಜಿಲ್ಲೆ ಮತ್ತು ಇತರ ಮಲೆನಾಡು ಜಿಲ್ಲೆಗಳಿಗೆ ಒಂದು ರೀತಿಯ ಸಂತೋಷದ ವಾತಾವರಣ. ನದಿ, ಹಳ್ಳ, ಕೆರೆಗಳು ತುಂಬಿ ತುಳುಕಿ ಜಲಪಾತಗಳು ಹಾಲ್ನೊರೆಯಂತೆ ಹರಿಯುತ್ತವೆ.
ಈ ಎಲ್ಲಾ ದೃಶ್ಯವನ್ನು ನೋಡಲು ರಾಜ್ಯದ, ದೇಶದ ಮೂಲೆ ಮೂಲೆಗಳಿಂದಲೂ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುವ ನಮ್ಮ ಜಿಲ್ಲೆಯ ಸೊಬಗು ನೋಡಿ ಬರುತ್ತಾರೆ. ಇದೆಲ್ಲದರ ಮಧ್ಯೆ ನಮ್ಮ ಕೊಡಗಿನಲ್ಲಿ ಹಿಂದಿನಿAದಲೂ ಕೆಸರು ಗೆದ್ದೆ ಕ್ರೀಡಾಕೂಟವು ಅಧಿಕವಾಗಿ ಗ್ರಾಮ ಗ್ರಾಮಗಳಲ್ಲೂ ನಡೆಯುತ್ತಾ ಬರುತ್ತಿದ್ದು, ಹಲವಾರು ಕ್ರೀಡಾಕೂಟಗಳನ್ನು ಕ್ರೀಡಾ ಸಂಘಗಳು ಆಯೋಜಿಸಿರುವುದನ್ನು ಕಾಣಬಹುದಾಗಿದೆ.
ಕಳೆದ ಹಲವಾರು ವರ್ಷಗಳಿಂದ ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ, ವೀರಾಜಪೇಟೆ ಬಳಿಯ ಬಿಟ್ಟಂಗಾಲದಲ್ಲಿ ನೆಡೆಯುತ್ತಿದ್ದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡೆ, ಕಡಂಗದಲ್ಲಿ ವರ್ಷಂಪ್ರತಿ ನಡೆಸುತ್ತಿರುವಂತಹ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ, ಕುಂಜಿಲ, ಪೊನ್ನಂಪೇಟೆ ಭಾಗದಲ್ಲಿ ನಡೆಯುವಂತಹ ಕ್ರೀಡಾಕೂಟ ಹಾಗೂ ಗ್ರಾಮಗಳಲ್ಲಿ, ಕೇರಿಗಳಲ್ಲಿ ಮನೆತನದವರು ನಡೆಸಿಕೊಂಡು ಬರುತ್ತಿರುವ ಕ್ರೀಡೆಗಳು , ಜಿಲ್ಲೆಯ ಪತ್ರಕರ್ತರು ನಡೆಸಿಕೊಂಡು ಬರುತ್ತಿರುವ ಕೆಸರುಗೆದ್ದೆ ಕ್ರೀಡೆಗಳನ್ನು ಕಳೆದ ಹಲವಾರು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ, ಅದೇ ರೀತಿ ಕೆಲವೊಂದು ವಿದ್ಯಾ ಸಂಸ್ಥೆಗಳಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಕ್ರೀಡಾಕೂಟ ಆಯೋಜಿಸುತ್ತಿರುವುದು ಕಂಡುಬರುತ್ತಿದ್ದು ಸಂತೋಷದ ವಿಷಯ. ವಿಪರ್ಯಾಸ ಅಂದರೆ ಇತ್ತೀಚಿನ ದಿನಗಳಲ್ಲಿ ಕೆಸರು ಗದ್ದೆ ಕ್ರೀಡೆಗಳು ಕಡಿಮೆಯಾಗುತ್ತಿರುವುದು ಇದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖ ಕಾರಣಗಳೆಂದರೆ , ಕೊಡಗಿನಲ್ಲಿ ಒಂದು ಕಾಲದಲ್ಲಿ ಪ್ರತಿ ಗ್ರಾಮದಲ್ಲೂ “ಕಕ್ಕಡ” ತಿಂಗಳಲ್ಲಿ ಕೆಸರು ಗದ್ದೆ ನಡೆಯುತ್ತಿತ್ತು. ಆದರೆ ಈಗ ಶೇ. ೭೦ ರಷ್ಟು ಕಡಿಮೆಯಾಗಿದೆ. ಕೊಡಗಿನ ಗದ್ದೆ ಪ್ರದೇಶಗಳೆಲ್ಲವೂ ಕಾಫಿ ತೋಟ ಮತ್ತು ವಸತಿ ಪ್ರದೇಶವಾಗಿ ಮಾರ್ಪಟ್ಟಿದ್ದು ಪ್ರಮುಖ ಕಾರಣ.
ಮಳೆ ಮತ್ತು ನೀರಿನ ಸಮಸ್ಯೆ
ಜೂನ್ ಮೊದಲ ವಾರದಲ್ಲಿ ಮಳೆ ಬರಬೇಕಿತ್ತು, ಈಗ ಜುಲೈ ಬಂದಿದೆ. ನಾಟಿ ತಡವಾದರೆ ಕೆಸರುಗದ್ದೆಗೂ ತಡವಾಗಿ ಕ್ರೀಡೆಗೂ ಪರಿಣಾಮ ಯುವಕ-ಯುವತಿಯರು ಬೆಂಗಳೂರು ಮತ್ತು ದೇಶ ವಿದೇಶಗಳಲ್ಲಿ ಕೆಲಸದಲ್ಲಿ ನಿರತರಾಗಿದ್ದು ಇಂತಹ ಕ್ರೀಡೆಗಳಿಂದ ದೂರವಾಗಿದ್ದಾರೆ. ಮೊಬೈಲ್, ಬೈಕ್, ಪಬ್ಜಿ ಮುಂತಾದವುಗಳಲ್ಲಿ ನಿರತರಾಗಿರುವುದು ಒಂದು ಕಾರಣ. ಕ್ರೀಡಾಕೂಟಗಳು ಆಯೋಜಿಸುತ್ತಿರುವ ಆಯೋಜಕರಿಗೂ ಖರ್ಚು ಹೆಚ್ಚಾಗಿ ಅದರಿಂದಲೂ ಕೂಡ ಹಿಂದೆ ಸರಿಯುತ್ತಿದ್ದಾರೆ ಇಂತಹ ಹಲವಾರು ಕಾರಣಗಳಿಂದ ನಮ್ಮ ಜಿಲ್ಲೆಯ ಕೆಸರು ಗದ್ದೆ ಕ್ರೀಡಾಕೂಟ ಕಡಿಮೆಯಾಗುತ್ತಿದೆ.
ಕೊನೆ ಮಾತು
ಕೊಡಗಿನ ಕೆಸರು ಗದ್ದೆ ಕಡಿಮೆಯಾಗಿರೋದು ಕೇವಲ ಆಟದ ನಷ್ಟ ಅಲ್ಲ. ಅದು ಐನ್ಮನೆ ಸಂಸ್ಕೃತಿ, ಕೃಷಿ ಸಂಸ್ಕೃತಿ, ಒಗ್ಗಟ್ಟಿನ ನಷ್ಟವಾಗಿದೆ, ಕ್ರೀಡೆಯಿಂದ ಕೇವಲ ಮನೋರಂಜನೆ ಮಾತ್ರವಲ್ಲ; ಒಗ್ಗಟ್ಟಿನ ಪ್ರದರ್ಶನವೂ ಕೂಡ ಆಗಲಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಇಂತಹ ಕ್ರೀಡೆಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳಲಿ ನಮ್ಮ ನಾಡಿನ ಕ್ರೀಡಾ ಸಂಸ್ಕೃತಿಗೆ ಕೆಸರುಗದ್ದೆ ಕ್ರೀಡಾಕೂಟವು ಒಂದು ಹೆಜ್ಜೆಯಾಗಲಿ.
-ಎಂ.ಬಿ. ನೌಫಲ್, ಕಡಂಗ