ಮುಳ್ಳೂರು, ಜು. ೧೫: ಸ್ಥಳೀಯ ಮುಳ್ಳೂರು, ಕಾರ್ಗೋಡು ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಹೆಚ್ಚಾಗುತ್ತಿದ್ದು, ನಿಡ್ತ ಮೀಸಲು ಅರಣ್ಯದಿಂದ ಬರುವ ಕಾಡುಕೋಣ, ಕಾಡೆಮ್ಮೆಗಳು ಪಕ್ಕದ ಕಾಫಿ ತೋಟದಲ್ಲಿ ಬೀಡುಬಿಡುತ್ತಿವೆ. ಇದರಿಂದ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಭಯದಿಂದ ಕೆಲಸ ಮಾಡುವಂತಾಗಿದೆ.
ಮುಳ್ಳೂರು, ಕಣಿವೆ, ಬಸವನಹಳ್ಳಿ ವ್ಯಾಪ್ತಿಯಲ್ಲಿ ಹಗಲು - ರಾತ್ರಿ ಎನ್ನದೆ ಕಾಡುಕೋಣಗಳು ಕಾಫಿ ತೋಟದಿಂದ ಮುಖ್ಯ ರಸ್ತೆ ದಾಟಿ ಇನ್ನೊಂದು ಬದಿಯಲ್ಲಿರುವ ಕಾಫಿ ತೋಟಕ್ಕೆ ಸಂಚರಿಸುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸವಾರರು ಕಾಡುಕೋಣಗಳನ್ನು ಕಂಡು ಗಾಬರಿಗೊಳ್ಳುವ ಘಟನೆಗಳು ನಡೆದಿವೆ.
ಗ್ರಾಮದ ಕಾರ್ಗೋಡು ಬಸವೇಶ್ವರ ದೇವಸ್ಥಾನದ ಬಳಿ ಬುಧವಾರ ಮಧ್ಯಾಹ್ನ ಗ್ರಾಮದ ಧರ್ಮಚಾರಿ ಎಂಬವರಿಗೆ ಸೇರಿದ ಹಸುಗಳನ್ನು ಮೇಯಲು ಕಟ್ಟಿಹಾಕಿದ್ದ ವೇಳೆ ಪಕ್ಕದ ಕಾಫಿ ತೋಟದಿಂದ ಬಂದ ಕಾಡು ಕೋಣವೊಂದು ಹಸುಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಹಸುಗಳು ಹಗ್ಗವನ್ನು ಕಿತ್ತು ಓಡಿಹೋಗಿವೆ. ಆ ಪೈಕಿ ಒಂದು ಹಸುಗೆ ಕಾಡುಕೋಣ ತಿವಿದು ಗಾಯಗೊಳಿಸಿದೆ. ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೂಗಿಕೊಂಡಾಗ ಕಾಡುಕೋಣ ಪಕ್ಕದ ಮತ್ತೊಂದು ಕಾಫಿ ತೋಟದೊಳಗೆ ಓಡಿದ ನಂತರ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಕಾಫಿ ತೋಟದಲ್ಲಿದ್ದ ಕಾಡುಕೋಣವನ್ನು ಪಟಾಕಿ ಹಾಗೂ ಇನ್ನಿತರ ಶಬ್ದ ಮಾಡಿ ಓಡಿಸಿದ್ದಾರೆ. ಕಾಡುಕೋಣ ದಾಳಿಯಿಂದ ಗಾಯಗೊಂಡಿರುವ ಹಸುವಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.
- ಭಾಸ್ಕರ್ ಮುಳ್ಳೂರು.