ಕೂಡಿಗೆ/ ಕಣಿವೆ, ಜು. ೧೫: ಕಳೆದ ಏಳು ವರ್ಷಗಳ ಹಿಂದೆ ಭಾರೀ ಮಳೆ ಸುರಿದ ಪರಿಣಾಮ ಜಲಪ್ರವಾಹಕ್ಕೆ ತುತ್ತಾಗಿದ್ದ ಕಣಿವೆ ರಾಮಲಿಂಗೇಶ್ವರ ದೇವಾಲಯದ ಸಮೀಪದ ತೂಗುಸೇತುವೆ ದುರಸ್ತಿಗೀಡಾಗಿ ಈಗ ಏಳು ವರ್ಷಗಳು ಕಳೆದಿವೆ. ಆದಾಗ್ಯೂ, ಇದೂವರೆಗೂ ಈ ತೂಗು ಸೇತುವೆಯ ದುರಸ್ತಿಗೆ ಮಾತ್ರ ಕಾಲ ಕೂಡಿ ಬರಲಿಲ್ಲ.

ಪ್ರತಿ ಮಳೆಗಾಲ ಬಂದಾಗ ಈ ತೂಗು ಸೇತುವೆಯನ್ನು ಅವಲಂಬಿಸಿರುವ ಈ ಭಾಗದ ಕೃಷಿಕರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕುಶಾಲನಗರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕಾವೇರಿ ಹಾಗೂ ಹಾರಂಗಿ ನದಿಗಳಿಂದ ಯಥೇಚ್ಛವಾಗಿ ನೀರು ಹರಿಸಿದಾಗ ಬಹಳಷ್ಟು ವಿಸ್ತಾರಗೊಂಡ ಪ್ರದೇಶದಲ್ಲಿ ಹರಿವ ನೀರಿನ ಹರಿವಿನ ಮೇಲಿನ ಶಿಥಿಲಗೊಂಡ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುವುದು ಮಾತ್ರ ಹರಸಾಹಸವಾಗುತ್ತಿದೆ.

ತಹಶೀಲ್ದಾರ್‌ರಿಂದ ತಾತ್ಕಾಲಿಕ ಕ್ರಮ

ಕುಶಾಲನಗರಕ್ಕೆ ಆಗಮಿಸುವ ಪ್ರವಾಸಿಗರು ಕಣಿವೆಯ ಶಿಥಿಲಾವಸ್ಥೆ ತಲುಪಿದ ತೂಗು ಸೇತುವೆಯನ್ನು ನೋಡಲು ಗುಂಪು ಗುಂಪಾಗಿ ಧಾವಿಸುತ್ತಿದ್ದುದನ್ನು ಕಂಡು ಎರವಾಗಬಹುದಾದ ಅಪಾಯವನ್ನು ತಡೆಗಟ್ಟಲು “ಶಕ್ತಿ'' ಈ ಹಿಂದೆ ವರದಿ ಮಾಡಿದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಕುಶಾಲನಗರ ತಹಶೀಲ್ದಾರ್ ತೂಗು ಸೇತುವೆ ಮೇಲೆ ಏಕ ಕಾಲಕ್ಕೆ ಐವರಿಗಿಂತ ಹೆಚ್ಚು ಮಂದಿಯ ಸಂಚಾರವನ್ನು ನಿಷೇಧಿಸಿದ್ದರು. ಈ ಕುರಿತಾದ ಎಚ್ಚರಿಕೆಯ ಫಲಕವನ್ನು ಸಂಬAಧಿತ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಬರೆಸಲಾಗಿತ್ತು. ಅದಾಗ್ಯೂ ಕೆಲ ಪುಂಡರು ಈ ಎಚ್ಚರಿಕೆ ಲೆಕ್ಕಿಸದೇ ಗುಂಪಾಗಿ ತೆರಳಿ ಪೋಟೋ ಕ್ಲಿಕ್ಲಿಸಿಕೊಳ್ಳುವುದು ಮಾಮೂಲಿಯಾಗಿದೆ. ನಾವು ಈ ಬಗ್ಗೆ ಜೋರು ಮಾಡಿದರೆ ನಮ್ಮನ್ನೇ ಪುಂಡರು ಗದರಿಸುತ್ತಾರೆ. ನಾವೇನು ಮಾಡಲಿ ಎನ್ನುತ್ತಾರೆ ದೇವಾಲಯದ ಸಹಾಯಕ ವಿರೂಪಾಕ್ಷ.

ಜಿಲ್ಲಾಧಿಕಾರಿ - ಶಾಸಕರು ಬಂದರೂ ಪ್ರಯೋಜನವಾಗಿಲ್ಲ !

ಶಿಥಿಲಗೊಂಡ ಕಣಿವೆ ಕಾವೇರಿ ನದಿಯ ತೂಗುಸೇತುವೆಯನ್ನು ಖುದ್ದು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮದ ದೇವಾಲಯ ಸಮಿತಿಯ ಕೋರಿಕೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದ ಈ ಹಿಂದಿನ ಜಿಲ್ಲಾಧಿಕಾರಿ ವೆಂಕಟ್‌ರಾಜ, ಶಾಸಕ ಡಾ.ಮಂತರ್ ಗೌಡ ಸೇತುವೆಯ ಸ್ಥಿತಿ ಗತಿ ಕಂಡು ಕೂಡಲೇ ಸೇತುವೆಯ ದುರಸ್ಥಿಗೆ ಯೋಜನೆ ರೂಪಿಸುವ ಭರವಸೆಯನ್ನು ನೀಡಿದ್ದರು. ಆದರೆ ಭರವಸೆ ನೀಡಿದ ಜಿಲ್ಲಾಧಿಕಾರಿ ಬೇರೆಡೆಗೆ ವರ್ಗವಾಗಿದ್ದು, ಸೇತುವೆಯ ಕಾಯಕಲ್ಪಕ್ಕೆ ಮುಂದಾಗುವ ಭರವಸೆ ನೀಡಿದ ಶಾಸಕರ ಅಧಿಕಾರ ಇನ್ನು ಎರಡು ವರ್ಷಗಳು ಬಾಕಿ ಇವೆ.

ಇಡೀ ಜಿಲ್ಲೆಗೆ ಮೊದಲೆಂಬAತೆ ನಿರ್ಮಾಣವಾದ ಕಣಿವೆಯ ತೂಗುಸೇತುವೆಯ ಕಾಯಕಲ್ಪಕ್ಕೆ ಇನ್ನಾದರೂ ಮುಂದಾಗುವರೇ ಎಂದು ಇಲ್ಲಿನ ಜನರು ಕಾಯುತ್ತಿದ್ದಾರೆ. ಹೆಜ್ಜೆ ಇಟ್ಟರೆ ಅಲುಗಾಡುವ, ಅಲ್ಲಲ್ಲಿ ನಟ್ಟು ಬೋಲ್ಟುಗಳು ಬಿದ್ದು ಹೋಗಿರುವ, ಹಾಗೂ ಕಬ್ಬಿಣದ ಸಲಾಕೆಗಳು ಕಿತ್ತು ನಿಂತಿರುವ ತೂಗು ಸೇತುವೆ ಮೇಲೆ ಹೋಗುವಾಗ ಕೆಳಗಡೆ ರಭಸದಿಂದ ಹರಿಯುವ ನದಿಯ ನೀರು ಕಂಡರೆ ತಲೆ ತಿರುಗುತ್ತದೆ. ಜೀವ ಕೈಗೆ ಬಂದ ಹಾಗೆ ಆಗುತ್ತದೆ. ಹಾಗಾಗಿ ಕೂಡಲೇ ಇದನ್ನು ಮೊದಲಿನಂತೆ ಸರಿ ಮಾಡಿಸಿದರೆ ಸಾಕು ಎನ್ನುತ್ತಾರೆ ದಿನದ ಎರಡೂ ಹೊತ್ತು ಇಲ್ಲಿ ಸಂಚರಿಸುವ ಕಮರಳ್ಳಿ ಗ್ರಾಮದ ರಾಜಮ್ಮ, ರತ್ನಮ್ಮ, ಜವರಮ್ಮ, ಗೀತಾ ಮುಂತಾದವರು. ಆವರ್ತಿಗಾಗಿ ಬಸ್‌ನಲ್ಲಿ ಕುಶಾಲನಗರ ತಲುಪಲು ೨೦ ಕಿಮೀ ದೂರವಾಗುತ್ತದೆ.

ಇಲ್ಲೇ ತೂಗು ಸೇತುವೆ ಮೇಲೆ ಹೋದರೆ ಕುಶಾಲನಗರ ಕೇವಲ ೫ ಕಿಮೀ ಆಗುತ್ತದೆ. ಆದರೆ ಹಾಳಾಗಿರುವ ತೂಗುಸೇತುವೆ ಮೇಲೆ ನಡೆಯುವುದೇ ಒಂದು ಸಾಹಸ ಎನ್ನುತ್ತಾರೆ ಕುಶಾಲನಗರದ ಕಾಲೇಜುಗಳಿಗೆ ತೆರಳುವ ರವಿ, ತೇಜ, ಶ್ರೇಯ, ಪಾವನಿ ಹಾಗೂ ಇತರ ವಿದ್ಯಾರ್ಥಿಗಳು. ಒಟ್ಟಾರೆ, ಇನ್ನಾದರೂ ಈ ಸೇತುವೆಯನ್ನು ಮೊದಲಿನ ಸ್ಥಿತಿಗೆ ತರಲು ಆಳುವವರು ಮುಂದಾದರೆ ಬಹಳ ಒಳ್ಳೆಯದು ಎನ್ನುತ್ತಾರೆ ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್.

- ಕೆ.ಎಸ್. ಮೂರ್ತಿ, ನಾಗರಾಜ ಶೆಟ್ಟಿ