*ಗೋಣಿಕೊಪ್ಪ, ಜು. ೧೫: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಪರಿಸರ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಹಾ ವಿದ್ಯಾಲಯದ ನರ್ಸರಿಯ ಜೌಗು ಪ್ರದೇಶದಲ್ಲಿ ವನಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪೊನ್ನಂಪೇಟೆಯ ಕೃಷಿ ವಿಶ್ವವಿದ್ಯಾಲಯ (ಯುಎಎಸ್), ಮಂಡ್ಯ ವ್ಯಾಪ್ತಿಯ ಅರಣ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪರಿಸರ ಪುನರುಜ್ಜೀವನ, ಕಾರ್ಯಕ್ರಮವನ್ನು ಅರಣ್ಯ ಮಹಾವಿದ್ಯಾಲಯ ನಡೆಸಿತು. ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಡಾ. ದೇವಗಿರಿ, ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು ಹಾಗೂ ಪುನರುಜ್ಜೀವನಗೊಳಿಸುವುದು ಇಂದಿನ ಅಗತ್ಯವಾಗಿದ್ದು, ಸ್ಥಳೀಯ ಪರಿಸ್ಥಿತಿಗೆ ಹೊಂದುವ ಸ್ವದೇಶಿ ಮರ ಜಾತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ನೆಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ನೆಟ್ಟಿರುವ ಪ್ರತಿಯೊಂದು ಸಸಿಯನ್ನು ತಮ್ಮ ಪದವಿ ಪೂರ್ಣಗೊಳ್ಳುವವರೆಗೆ ವೈಯಕ್ತಿಕ ಜವಾಬ್ದಾರಿಯಿಂದ ಪೋಷಿಸಿ ಸಂರಕ್ಷಿಸುವAತೆ ಕರೆ ನೀಡಿದರು. ಈ ಮೂಲಕ ಮಹಾವಿದ್ಯಾಲಯದಲ್ಲಿ ಶಾಶ್ವತ ಹಸಿರು ಪರಂಪರೆಯನ್ನು ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ "ಏಕ್ ಪೇಡ್ ಮಾ ಕೆ ನಾಮ್" ಅಭಿಯಾನದ ಅಂಗವಾಗಿ, ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಎಸ್‌ಸಿ. ಅರಣ್ಯ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ತಲಾ ಒಂದು ಸಸಿ ನೆಟ್ಟು ವನಮಹೋತ್ಸವವನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆಯ ವಲಯ ಅರಣ್ಯಾಧಿಕಾರಿ ನಿವೇದಿತಾ, ಅರಣ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ವಿಜಯ್ ಕುಮಾರ್, ಅರಣ್ಯ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಇದ್ದರು.