ಚೆಟ್ಟಳ್ಳಿ / ಸುಂಟಿಕೊಪ್ಪ, ಜು. ೧೫: ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾನವ - ವನ್ಯಜೀವಿ ಸಂಘರ್ಷದ ಗಂಭೀರತೆ ಮತ್ತೊಮ್ಮೆ ಬೆಳಕಿಗೆ ಬಂತು.
ಕೆದಕಲ್, ಹೊರೂರು, ಮೋದೂರು, ಹಾಲೇರಿ, ಈರಳೆವಳಮುಡಿ, ಅತ್ತೂರು - ನಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ತೋಟಗಾರರು ಕಾಡಾನೆ, ಕಾಡೆಮ್ಮೆ ಸೇರಿದಂತೆ ವನ್ಯಜೀವಿಗಳ ಹಾವಳಿಯಿಂದ ಜೀವಭಯದಲ್ಲಿ ಬದುಕುವಂತಾಗಿದ್ದು, ಶಾಶ್ವತ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಪ್ಪ ಕೋಟ್ಯನ್ ಗ್ರಾಮಸ್ಥರ ಪರವಾಗಿ ಲಿಖಿತ ಮನವಿ ಸಲ್ಲಿಸಿ ಹಲವು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟರು.
ಆನೆಕಾಡು ಹಾಗೂ ಮೀನುಕೊಲ್ಲಿ ಅರಣ್ಯ ವಲಯಗಳಲ್ಲಿ ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ಸಮನ್ವಯದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು. ಐಸಿಎಆರ್ - ಚೆಟ್ಟಳ್ಳಿ ಫಾರ್ಮ್ ಸಮೀಪದ ಸೌರ/ವಿದ್ಯುತ್ ಆನೆ ಗೇಟ್ ಅನ್ನು ಶಾಶ್ವತವಾಗಿ ಮುಚ್ಚಬೇಕು. ಎಲಿಫೆಂಟ್ ಟಾಸ್ಕ್ ಫೋರ್ಸ್ಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ತರಬೇತಿ ಹಾಗೂ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಸ್ತುತ ೬೦ಕ್ಕೂ ಹೆಚ್ಚು ಕಾಡೆಮ್ಮೆಗಳು ಹಲವು ಗುಂಪುಗಳಾಗಿ ತೋಟ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಅವುಗಳನ್ನು ಪುಷ್ಪಗಿರಿ ಅರಣ್ಯ ಪ್ರದೇಶದೊಳಗೆ ಓಡಿಸುವ ವಿಶೇಷ ಕಾರ್ಯಾಚರಣೆಯನ್ನು ಪ್ರತಿ ತಿಂಗಳು ಸ್ಥಳೀಯರಿಗೆ ಪೂರ್ವಮಾಹಿತಿ ನೀಡಿ ನಡೆಸಬೇಕು ಎಂದು ರೈತರು ಒತ್ತಾಯಿಸಿದರು.
ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೪ ಗಂಟೆಯೂ ಕಾರ್ಯನಿರ್ವಹಿಸುವ ವನ್ಯಜೀವಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು. ಆನೆ ಓಡಿಸುವ ಪ್ರತಿಯೊಂದು ಕಾರ್ಯಾಚರಣೆಯ ಸಂದರ್ಭದಲ್ಲೂ ಜೀವರಕ್ಷಕ ವಾಹನ ಹಾಗೂ ೧೦೮ ಆ್ಯಂಬ್ಯುಲೆನ್ಸ್ ಕಡ್ಡಾಯವಾಗಿ ನಿಯೋಜಿಸ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಅರಣ್ಯ ಇಲಾಖೆಯೊಳಗಿನ ಸಮನ್ವಯದ ಕೊರತೆ, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದಿರುವುದು ಹಾಗೂ ಬೆಳೆಹಾನಿ ಮತ್ತು ಜೀವಹಾನಿಗೆ ಸಂಬAಧಿಸಿದ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸುವ ಜವಾಬ್ದಾರಿಯನ್ನು ತಾವು ವಹಿಸುವುದಾಗಿ ಭರವಸೆ ನೀಡಿದ ಅವರು, ಅಧಿಕಾರಿಗಳು ಜನರೊಂದಿಗೆ ಸಮನ್ವಯ ಸಾಧಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಮಾನವ - ವನ್ಯಜೀವಿ ಸಂಘರ್ಷ ತಡೆಗೆ ಸಮಗ್ರ ಯೋಜನೆ ರೂಪಿಸಲಾಗುತ್ತಿದ್ದು, ಶಾಶ್ವತ ಫಲಿತಾಂಶ ಕಾಣಲು ೩ ರಿಂದ ೪ ವರ್ಷಗಳ ಅವಧಿ ಬೇಕಾಗಬಹುದು ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಕಾಡೆಮ್ಮೆ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ ದುಬಾರಿ ಯಾಗಿದ್ದು, ಪರಿಹಾರ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥ ಪುಲ್ಲೆರ ವಸಂತ್, ಕಾಡೆಮ್ಮೆಗಳು ಐದು - ಆರು ಗುಂಪುಗಳಾಗಿ ಸಂಚರಿಸುತ್ತಿದ್ದು, ಕೃಷಿ ಮತ್ತು ಜನಜೀವನ ದುಸ್ತರವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ತಹಶೀಲ್ದಾರ್ ಕೃಷ್ಣಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.