*ಗೋಣಿಕೊಪ್ಪ, ಜು. ೧೪: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ ನಡೆಯಿತು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಕರೆ ನೀಡಲಾಯಿತು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಶಿಕ್ಷಣದ ಜೊತೆಗೆ ಸೇವಾ ಮನೋಭಾವ, ಶಿಸ್ತು ಹಾಗೂ ಜವಾಬ್ದಾರಿಯುತ ನಾಯಕತ್ವವನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಉತ್ತಮ ಕನಸುಗಳನ್ನು ಕಾಣುವುದರೊಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರ ಬಗ್ಗೆ ಗೌರವ ಮತ್ತು ಭಕ್ತಿಭಾವ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಶಿಸ್ತು, ಸಮಯಪಾಲನೆ ಹಾಗೂ ತಾಳ್ಮೆ ನಾಯಕತ್ವದ ಪ್ರಮುಖ ಗುಣಗಳಾಗಿವೆ. ಶಾಲೆಯ ಸ್ವಚ್ಛತೆ, ಆರೋಗ್ಯ, ಕ್ರೀಡೆ, ಸಂಸ್ಕೃತಿ ಹಾಗೂ ಶಿಸ್ತಿನ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿ ಸಂಸತ್ತನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕು ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಮಾತನಾಡಿ, ಅಧಿಕಾರದೊಂದಿಗೆ ಜವಾಬ್ದಾರಿಯೂ ಬರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಾಯಕತ್ವ, ಶಿಸ್ತು, ಸೇವಾ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಲೆಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ನಾಯಕನಾಗಿ ವಯಂಕ್ ಮಂಜುನಾಥ್, ಉಪನಾಯಕಿಯಾಗಿ ಗಾಯತ್ರಿ ಎಚ್.ಎಂ., ಕ್ರೀಡಾ ನಾಯಕನಾಗಿ ವೈ.ಎನ್. ನಿತಿನ್, ಉಪನಾಯಕಿಯಾಗಿ ನಿತ್ಯ ಪಿ.ಎ., ಸಾಂಸ್ಕೃತಿಕ ನಾಯಕಿಯಾಗಿ ನಿರೂಷ್ ಟಿ.ಆರ್., ಉಪನಾಯಕನಾಗಿ ಮೋದಕ್ ಕೆ.ಜೆ., ವಾರ್ತಾ ಮತ್ತು ಮಾಹಿತಿ ನಾಯಕಿಯಾಗಿ ಮನ್ವಿತಾ ವೈ.ಎ., ಉಪನಾಯಕಿಯಾಗಿ ಸಮೀಕ್ಷಾ ರೈ ಬಿ.ಹೆಚ್., ಆರೋಗ್ಯ ಮತ್ತು ನೈರ್ಮಲ್ಯ ನಾಯಕಿಯಾಗಿ ಶರಣ್ಯ ಎಸ್., ಉಪನಾಯಕಿಯಾಗಿ ರಶ್ಮಿತಾ ಎಸ್., ಆಹಾರ ಸಮಿತಿ ನಾಯಕಿಯಾಗಿ ಹರ್ಷಿತಾ ಬಿ.ಹೆಚ್., ಉಪನಾಯಕಿಯಾಗಿ ಅಧೀನ ಎಂ.ಆರ್., ಪರಿಸರ ಸಮಿತಿ ನಾಯಕಿಯಾಗಿ ರಂಜಿತಾ ಬಿ.ಆರ್., ಉಪನಾಯಕಿಯಾಗಿ ಚರಿತಾ ಪಿ.ಎಸ್., ಸ್ವಚ್ಛತಾ ಸಮಿತಿ ನಾಯಕಿಯಾಗಿ ಕಲ್ಪನಾ ಜೆ.ಕೆ., ಉಪನಾಯಕನಾಗಿ ಅಂಕುಶ್ ಶರ್ಮ, ನೀರು ನಿರ್ವಹಣಾ ಸಮಿತಿ ನಾಯಕನಾಗಿ ರಾಕೇಶ್ ಶರ್ಮ ಹಾಗೂ ಉಪನಾಯಕನಾಗಿ ರಾಜ್ ಭರತ್ ಸಿಂಗ್ ಪ್ರತಿಜ್ಞೆ ಸ್ವೀಕರಿಸಿದರು.

ಶಾಲೆಯ ಅಭಿವೃದ್ಧಿ, ಶಿಸ್ತು ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದಾಗಿ ವಿದ್ಯಾರ್ಥಿ ಪ್ರತಿನಿಧಿಗಳು ಪ್ರತಿಜ್ಞೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.