ಪೊನ್ನಂಪೇಟೆ, ಜು. ೧೪: ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದು ಅಭಿವೃದ್ಧಿಯಿಂದ ವಂಚಿತವಾಗಿದ್ದ ಹುದಿಕೇರಿ ಗ್ರಾಮದ ಮಹಿಳಾ ಸಮಾಜದ ಕಟ್ಟಡವನ್ನು ಶಾಸಕ ಎ. ಎಸ್. ಪೊನ್ನಣ್ಣ ಅವರ ವಿಶೇಷ ಅನುದಾನದಲ್ಲಿ ನವೀಕರಿಸಲಾಗಿದ್ದು, ಇದೀಗ ಮಹಿಳಾ ಸಮಾಜದ ಸದಸ್ಯರ ಬಳಕೆಗೆ ಸಜ್ಜುಗೊಂಡಿದೆ.
ಕಟ್ಟಡದ ದುರವಸ್ಥೆ ಕುರಿತು ಮಹಿಳಾ ಸಮಾಜದ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ತಕ್ಷಣ ಸ್ಪಂದಿಸಿದ ಶಾಸಕರು ನವೀಕರಣ ಕಾಮಗಾರಿಗೆ ಅಗತ್ಯ ಅನುದಾನ ಮಂಜೂರು ಮಾಡಿದ್ದರು. ಆ ಅನುದಾನದಡಿ ಕಟ್ಟಡದ ದುರಸ್ತಿ ಹಾಗೂ ನವೀಕರಣ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ಇದೀಗ ಪೂರ್ಣಗೊಂಡಿದೆ.
ಪೂರ್ಣಗೊAಡ ಕಾಮಗಾರಿಯನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಹಾಗೂ ಪಕ್ಷದ ಮುಖಂಡ ಅಜ್ಜಿಕುಟ್ಟಿರ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು.
ನವೀಕೃತ ಕಟ್ಟಡದಿಂದ ಮಹಿಳಾ ಸಮಾಜದ ಸಭೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗಲಿದೆ ಎಂದು ಮಹಿಳಾ ಸಮಾಜದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.