ವೀರಾಜಪೇಟೆ, ಜು. ೧೩: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಪರಿವರ್ತನೆಗೊಳಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಖಂಡನೀಯ ಎಂದು ಗ್ರಾಮಸ್ಥರ ಪರವಾಗಿ ಕೆ.ಪಿ ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಹೋಬಳಿಯ ಕಣ್ಣಂಗಾಲ ಗ್ರಾಮದ ಸರ್ವೆ ಸಂಖ್ಯೆ ೧೨೬/೧, ೧೨೬/೨, ೧೨೬/೩, ೧೨೬/೪ ರಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರಕ್ಕೆ ಮಾರ್ಪಾಡು ಮಾಡಿ ಆ ಜಾಗದಲ್ಲಿ ಬಡಾವಣೆಯಾಗಿ ಪರಿವರ್ತಿಸಿ ನೂರಾರು ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ವಿಚಾರದಲ್ಲಿ ಜೂನ್ ೨೦ ರಂದು ಕಣ್ಣಂಗಾಲ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒಕ್ಕೊರಲಿನ ಖಂಡನ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಗ್ರಾಮದಲ್ಲಿರುವ ಕಿರಿದಾದ ರಸ್ತೆ ಮತ್ತು ಮೂಲಭೂತ ಸೌಕರ್ಯಗಳಿಗೂ ತೊಂದರೆ ಉಂಟಾಗುತ್ತದೆ ಎಂದು ದೂರಿದರು.

ಕಣ್ಣಂಗಾಲ ದೇವಾಲಯ ಸಮಿತಿ ಅಧ್ಯಕ್ಷ ಮಚ್ಚಾರಂಡ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಊರಿಗೆ ಧÀಕ್ಕೆ ಬಾರದ ರೀತಿಯಲ್ಲಿ ಮಾಲೀಕರು ಕೃಷಿ ಭೂಮಿಯನ್ನು ಮಾರಾಟ ಮಾಡುವುದರಲ್ಲಿ ನಮ್ಮ ಅಭ್ಯಂತರ ಇಲ್ಲ. ಆದರೆ ಪರಿವರ್ತನೆ ಮಾಡಿ ಬಡಾವಣೆ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ವಿ.ಎಲ್ ಆನಂದ್, ಕೋರಂಡ ಬೆಳ್ಳಿಯಪ್ಪ, ವಿ.ಸಿ. ಕಿರಣ್, ವಿ.ಬಿ. ಲೋಕೇಶ್, ಎನ್.ಎಸ್. ತಿಮ್ಮಯ್ಯ ಉಪಸ್ಥಿತರಿದ್ದರು.