ಗೋಣಿಕೊಪ್ಪಲು, ಜು. ೧೨: ಸಮಾಜದ ಒಗ್ಗಟ್ಟು ಸದಾ ಮುಂದುವರಿಯಬೇಕು. ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಪತ್ನಿ ಅಜ್ಜಿಕುಟ್ಟಿರ ಕಾಂಚನಾ ಪೊನ್ನಣ್ಣ ಕರೆ ನೀಡಿದರು.
ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಹಾತೂರಿನ ದೊಡ್ಡಮನೆ ತಮ್ಮಯ್ಯ ಅವರ ಭತ್ತದ ಗದ್ದೆಯಲ್ಲಿ ಆಯೋಜಿಸಲಾಗಿದ್ದ ೫ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಒಕ್ಕಲಿಗರ ಕೆಸರುಗದ್ದೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದ್ದು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಯುತ್ತಿದೆ. ಇಂತಹ ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಒಕ್ಕಲಿಗರ ಯುವ ವೇದಿಕೆ ತಾಲೂಕು ಅಧ್ಯಕ್ಷ ವಿ.ಜಿ. ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಬಾಂಧವರ ಒಗ್ಗೂಡುವಿಕೆಗಾಗಿ ಕಳೆದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಐದು ವರ್ಷಗಳಿಂದ ಕ್ರೀಡೋತ್ಸವ ಆಯೋಜಿಸಲಾಗುತ್ತಿದೆ. ಸಮಾಜದವರಿಂದ ನಿರೀಕ್ಷೆಗೂ ಮೀರಿದ ಬೆಂಬಲ ದೊರೆಯುತ್ತಿದ್ದು, ಯುವಕ-ಯುವತಿಯರಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಯಶಸ್ವಿಯಾಗುತ್ತಿದೆ ಎಂದರು.
ಕ್ರೀಡೋತ್ಸವ ಯಶಸ್ಸಿಗೆ ಸಹಕರಿಸಿದ ದಾನಿ ಹಾಗೂ ಕಾಫಿ ಬೆಳೆಗಾರರಾದ ದೊಡ್ಡಮನೆ ಕೀರ್ತಿಕಿರಣ್ ಮತ್ತು ಚೈತ್ರ ಕೀರ್ತಿಕಿರಣ್ ಅವರನ್ನು ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಜಿ. ಅನಿಲ್ ಕುಮಾರ್, ಕೆಸರು ಗದ್ದೆ ಕ್ರೀಡಾಕೂಟದ ಅಧ್ಯಕ್ಷ ಹಂಚಿನಮನೆ ಡಿ. ಶ್ರೀನಿವಾಸ್, ಸ್ಥಳದಾನಿ ಡಿ.ಇ. ತಮ್ಮಯ್ಯ, ಒಲಿಂಪಿಯನ್ ವಿ.ಆರ್. ರಘುನಾಥ್, ನಿವೃತ್ತ ಎಇಇ ವಿ.ಕೆ. ಮಹದೇವ್, ಡಾ. ದೊಡ್ಡಮನೆ ಸಿ. ಸಾತ್ಯಕಿ, ಡಾ. ದೊಡ್ಡಮನೆ ಎಸ್. ಸುಶ್ಮಿತ, ವಕೀಲ ಹಂಚಿನಮನೆ ಸಿ. ಶರತ್‌ಚಂದ್ರ, ಭಾರತೀಯ ಸೇನೆಯ ಕಿರಿಯ ಅಧಿಕಾರಿ ವಿ.ಪಿ. ಗಿರೀಶ್, ಸಾಹಿತಿ ಹಂಚಿನಮನೆ ಭವ್ಯ ಪ್ರಮೋದ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ವಿವಿಧ ಗ್ರಾಮಗಳಿಂದ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟಕ್ಕೆ ಮೆರುಗು ನೀಡಿದರು.
ಪ್ರಾಸ್ತಾವಿಕವಾಗಿ ವಿ.ಎನ್. ಮಹೇಶ್ ಮಾತನಾಡಿದರು. ರಂಜನ್ ಮತ್ತು ತಂಡದವರು ರೈತ ಗೀತೆ ಹಾಡಿದರು. ದೀಪಿಕ ತ್ರಷಾ ಹಾಗೂ ಪರ್ಲ್ ಪ್ರತಿಷ್ಠ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಹೆಚ್.ಎಂ. ಗೋಪಾಲಕೃಷ್ಣ ಸ್ವಾಗತಿಸಿದರು. ಚಂದನ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವೈವಿಧ್ಯಮಯ ಕ್ರೀಡಾಕೂಟ
ಕೆಸರುಗದ್ದೆಯಲ್ಲಿ ನಡೆದ ವೈವಿಧ್ಯಮಯ ಕ್ರೀಡಾಕೂಟ ಜನಮನ ರಂಜಿಸಿತು. ಮಹಿಳಾ ಥ್ರೋಬಾಲ್, ಪುರುಷರ ವಾಲಿಬಾಲ್, ಪುರುಷರ ಹಗ್ಗ ಜಗ್ಗಾಟ, ಮಹಿಳೆಯರ ಹಗ್ಗಜಗ್ಗಾಟ ಪುರುಷರಿಗೆ ಹಾಗೂ ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ. ಪಾಸಿಂಗ್ ದ ಬಾಲ್, ಬಾಲಕ ಬಾಲಕಿಯರಿಗೆ, ಮಕ್ಕಳಿಗೆ ಓಟದ ಸ್ಪರ್ಧೆ, ಕಪಲ್ಸ್ ರೇಸ್ ನಡೆದವು.
ಮೆರವಣಿಗೆ
ಕ್ರೀಡೋತ್ಸವ ಅಂಗವಾಗಿ ಹಾತೂರಿನ ಶ್ರೀ ಭದ್ರಕಾಳಿ ದೇವಾಲಯ ಆವರಣದಿಂದ ಕಳಸ ಹೊತ್ತ ಮಹಿಳೆಯರು, ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಸಾಗಿ ಬರುವ ಮೂಲಕ ಮೈದಾನ ಪ್ರವೇಶ ಮಾಡಿದರು. ಮೆರವಣಿಗೆಯನ್ನು ಮಹಿಳೆಯರು ಆರತಿ ಬೆಳಗುವ ಮೂಲಕ ಬರಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.