ಶನಿವಾರಸಂತೆ, ಜು. ೧೨: ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನ ಹೊಳೆ ಸಾಲಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹಗಳು ಭಾನುವಾರ ಪತ್ತೆಯಾಗಿವೆ.
ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಿದವು.
ಗ್ರಾಮದ ನಿವಾಸಿಗಳಾದ ಶಿವರಾಜ್ (೫೦) ಹಾಗೂ ಎನ್.ಬಿ.ನಾಗರಾಜ್ (೪೫) ಗುರುವಾರ ರಾತ್ರಿ ಗ್ರಾಮದ ಹೇಮಾವತಿ ನದಿ ಹಿನ್ನೀರಿನ ಹೊಳೆ ಸಾಲಿನಲ್ಲಿ ಮೀನು ಹಿಡಿಯಲು ತೆರಳಿದ್ದು ಶುಕ್ರವಾರ ಬೆಳಗ್ಗೆಯಾದರೂ ಹಿಂತಿರುಗದೆ ಕಣ್ಮರೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಆರಂಭವಾಗಿದ್ದ ಶೋಧ ಕಾರ್ಯ ಭಾನುವಾರವೂ ಮುಂದುವರೆದು ೩ ದಿನಗಳ ನಿರಂತರ ಹುಡುಕಾಟದ ಬಳಿಕ ಕಣ್ಮರೆಯಾಗಿದ್ದ ಶಿವರಾಜ್ ಮತ್ತು ನಾಗರಾಜ್ ಇವರುಗಳ ಮೃತದೇಹಗಳು ಕೊನೆಗೂ ಪತ್ತೆಯಾಗಿವೆ.
ಎನ್ಡಿಆರ್ಎಫ್ ತಂಡದ ಇನ್ಸ್ಪೆಕ್ಟರ್ ಕಮಾಂಡರ್ ರಂಬಾಜಿ ನೇತೃತ್ವದಲ್ಲಿ ಎಲ್ಲಪ್ಪ, ಸೌಮ್ಯಕುಮಾರ್, ಸಿಬ್ಬಂದಿ ಹಾಗೂ ಸೋಮವಾರಪೇಟೆ ಅಗ್ನಿಶಾಮಕ ದಳದ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು.
ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ, ಕೊಡ್ಲಿಪೇಟೆ ಕಂದಾಯ ಇಲಾಖೆ ಕಂದಾಯ ಪರಿವೀಕ್ಷಕ ಮನು, ಶನಿವಾರಸಂತೆ ಪೊಲೀಸ್ ಠಾಣೆ ಪಿಎಸ್ಐ ಹೆಚ್.ವೈ.ಚಂದ್ರ, ಸಿಬ್ಬಂದಿ ಸಂತೋಷ್, ಹರ್ಷ, ಮಹೇಶ್, ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಎಎಸ್ಐ ಲಕ್ಷಿö್ಮÃಪ್ರಸಾದ್ ರೈ, ಸಿಬ್ಬಂದಿ ಮೂರ್ತಿ ಇವರುಗಳು ೩ ದಿನಗಳಿಂದ ಕಾರ್ಯಾಚರಣೆ ಸ್ಥಳದಲ್ಲೇ ಹಾಜರಿದ್ದರು.
ಶಾಸಕರ ಭೇಟಿ
ಭಾನುವಾರ ಘಟನಾ ಸ್ಥಳಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ೨ ಕುಟುಂಬಗಳಿಗೆ ತಲಾ ರೂ. ೧೫ ಸಾವಿರ ಧನಸಹಾಯ ನೀಡಿ, ಮುಂದೆ ಸರ್ಕಾರದಿಂದ ಸಹಾಯ ದೊರಕಿಸುವ ಭರವಸೆ ನೀಡಿದರು. ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಧನಿಕಾ ಹಾಗೂ ಸಿಬ್ಬಂದಿ ಘಟನಾ ಸ್ಥಳದಲ್ಲೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದರು.ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಶಿವರಾಜು ಮತ್ತು ನಾಗರಾಜು ಮೀನು ಹಿಡಿಯಲು ತೆರಳಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆಯಿಂದ ನೀರುಗುಂದ ಗ್ರಾಮದಲ್ಲಿ ದುಃಖ ಮಡುಗಟ್ಟಿದ್ದು, ಶೋಕದ ವಾತಾವರಣ ನಿರ್ಮಾಣವಾಗಿತ್ತು.