ಕುಶಾಲನಗರ, ಜು. ೧೨: ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳ ಫ್ರೆಶರ್ಸ್ ಡೇ ಆರೋಹಣ್ ಫೆಸ್ಟ್-೨೦೨೬ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವ್ಯಾಸಂಗದ ಪ್ರಮುಖ ಘಟ್ಟಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ಉತ್ತಮ ಅಂಕಗಳಿಸಿ ಗುರಿ ಸಾಧಿಸಿದರೆ ಮುಂದಿನ ಜೀವನ ಸುಗಮವಾಗಲಿದೆ. ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರಲ್ಲದೆ ಸಂಚಾರಿ ನಿಯಮಗಳ ಪಾಲನೆ, ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.

ಪಿರಿಯಾಪಟ್ಟಣ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ನಂಜುAಡ ಸ್ವಾಮಿ ಮುಖ್ಯ ಭಾಷಣ ಮಾಡಿ, ಪ್ರಸಕ್ತ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಬೇಕಾದ ಸಂಪನ್ಮೂಲಗಳು ಯಥೇಚ್ಚವಾಗಿವೆ. ಅದನ್ನು ಸದ್ಭಳಕೆ ಮಾಡಿಕೊಂಡು ಯಶಸ್ವಿಯಾಗುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಹೇಳಿದರು.

ಪಿಯು ಕಾಲೇಜು ಪ್ರಾಂಶುಪಾಲ ನಾಗೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಪ್ರಧಾನ ಗೌತಮ್ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣ, ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ಇದ್ದರು.