ಶನಿವಾರಸಂತೆ, ಜು. ೧೨: ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರೌಢಶಾಲೆ ವಿಭಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹೆಣ್ಣುಮಕ್ಕಳಿಗೆ ಹೆಚ್ಪಿವಿ ವ್ಯಾಕ್ಸಿನ್ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರದ ಆದೇಶದನ್ವಯ ಆರೋಗ್ಯ ಇಲಾಖೆ ೧೪ ರಿಂದ ೧೫ ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಹೆಚ್ಪಿವಿ ವ್ಯಾಕ್ಸಿನ್ ಹಾಕುತ್ತಿದೆ. ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ೧೪ ರಿಂದ ೧೫ ವರ್ಷದ ಒಳಗಿನ ೪೨ ಹೆಣ್ಣುಮಕ್ಕಳಿಗೆ ವ್ಯಾಕ್ಸಿನ್ ಹಾಕಿ ದೃಢೀಕರಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಚಿತಾ, ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಿಕಾ, ಹಿರಿಯ ಆರೋಗ್ಯಾಧಿಕಾರಿ ಸರಸ್ವತಿ, ಸಮುದಾಯ ಅಧಿಕಾರಿಯವರಾದ ಸವಿತಾ ಮತ್ತು ನಂದೀಶ್, ಆಶಾ ಕಾರ್ಯಕರ್ತೆಯರಾದ ಉಷಾ ಜಯೇಶ್ ಹಾಗೂ ಸಂಧ್ಯಾ ಪಾಲ್ಗೊಂಡಿದ್ದರು. ಈ ಸಂದರ್ಭ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾದರ್ ಜಿಬಿ ಥೋಮಸ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.