ಮಡಿಕೇರಿ, ಜು. ೯: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಗೊಣಿಕೊಪ್ಪಲು ಕಾಫಿ ಮಂಡಳಿಯ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಮಟ್ಟದ ಕಾಫಿ ಬೆಳೆಗಾರರ ಸಭೆ ನಡೆಯಿತು.

ಹಿರಿಯ ಕಾಫಿ ಬೆಳೆಗಾರರಾದ ಮಾಚಂಗಡ ಡಿಕ್ಕಿ ಅಯ್ಯಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಾಳೆಲೆ ವಲಯ ಕಾಫಿ ಮಂಡಳಿಯ ಸಹಾಯಕ ವಿಸ್ತರಣಾಧಿಕಾರಿ ಮಹಿಜಾ ಅವರು ಮಾತನಾಡಿ, ಕಾಫಿ ಮಂಡಳಿಯ ವತಿಯಿಂದ ಪ್ರಸ್ತುತ ಬೆಳೆಗಾರರಿಗೆ ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿದರು.

ಕಾಫಿ ಬೆಳೆಯಲ್ಲಿ ಕಾಣಿಸಿಕೊಳ್ಳುವ ಕೊಳೆರೋಗ, ಬರ‍್ರಿ ಬೋರ್ ಹಾಗೂ ಶಾಟ್ ಹೋಲ್ ಬೋರ್ ರೋಗಗಳನ್ನು ತಡೆಗಟ್ಟುವ ವಿಧಾನಗಳು, ತೋಟ ನಿರ್ವಹಣಾ ಕ್ರಮಗಳು ಹಾಗೂ ವೈಜ್ಞಾನಿಕ ಕಾಫಿ ಕೃಷಿ ಪದ್ಧತಿಗಳ ಕುರಿತು ವಿವರಿಸಿದರು. ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಕಾಫಿ ಉತ್ಪಾದನೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಬೆಳೆಗಾರರಿಗೆ ತಿಳಿಸಿದರು.

ಕಾಫಿ ಮಂಡಳಿಯ ಮಣ್ಣು ವಿಜ್ಞಾನಿ ಪ್ರಫುಲ ಕುಮಾರಿ ಅವರು ಕಾಫಿ ಕೃಷಿಯಲ್ಲಿ ಪೌಷ್ಟಿಕಾಂಶಗಳ ನಿರ್ವಹಣೆ, ಕಾಫಿ ಗಿಡಗಳ ಕಂಬ ಚಿಗುರಿನಿಂದ ಗಿಡ ಬೆಳೆಸುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಬೆಳೆಗಾರರು ಪ್ರತಿ ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಅದರ ಆಧಾರದ ಮೇಲೆ ಗಿಡಗಳ ಆರೈಕೆಗೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೊಳುವಂಡ ಧನ್ಯ ಪ್ರಾರ್ಥಿಸಿದರು. ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ ನಿರೂಪಿಸಿದರು.

ವೇದಿಕೆಯಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಾಟಿಮಾಡ ಶರೀನ್ ಮತ್ತಣ್ಣ, ಶ್ರೀ ಕಾಲಭೈರವ ದೇವಸ್ಥಾನದ ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಗೊರುಗೋಡು ಅಯ್ಯಪ್ಪ ಸಂಘದ ಅಧ್ಯಕ್ಷ ಕಳ್ಳೇಂಗಡ ಶಾಂತ ಉತ್ತಯ್ಯ, ಇಗ್ಗುತ್ತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಚಿಮ್ಮು ಸೋಮಯ್ಯ, ಕಾರ್ಯದರ್ಶಿ ಫ್ರಿನ್ಸ್ ಪೊನ್ನಪ್ಪ, ವಿಜಯ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಮುಕ್ಕಾಟಿರ ವಿಕಾಸ್ ಉತ್ತಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಸುಮಾರು ೩೫ಕ್ಕೂ ಅಧಿಕ ಕಾಫಿ ಬೆಳೆಗಾರರು ಭಾಗವಹಿಸಿದ್ದರು.