ವೀರಾಜಪೇಟೆ, ಜು. ೯: ಮನೆಯ ಪಕ್ಕದ ಕಾಫಿ ತೋಟದಲ್ಲಿ ಮರದ ಕೊಂಬೆ ಕಡಿಯುವ ಸಂದರ್ಭ ೧೧ ಕೆ.ವಿ. ವಿದ್ಯುತ್ ತಂತಿಗೆ ಕೊಂಬೆ ತಗುಲಿ ವಿದ್ಯುತ್ ಸ್ಪರ್ಶದಿಂದ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ರುದ್ರಗುಪ್ಪೆ ಗ್ರಾಮದ ಬೆಳೆಗಾರ ಕೆ. ಚಂಗಪ್ಪ (ಅರುಣ್-೫೬) ಮೃತ ವ್ಯಕ್ತಿ. ಬುಧವಾರ ಮಧ್ಯಾಹ್ನ ಸುಮಾರು ೩ ಗಂಟೆ ವೇಳೆಯಲ್ಲಿ ಮನೆಯ ಸಮೀಪದ ಕಾಫಿ ತೋಟದಲ್ಲಿ ಮರದ ಕೊಂಬೆ ಕಡಿಯುತ್ತಿದ್ದಾಗ, ಕತ್ತರಿಸಿದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಅರುಣ್ ಚಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯವರು ಹಾಗೂ ಸ್ಥಳೀಯರು ತಕ್ಷಣ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಸೆಸ್ಕಾಂ ಕಚೇರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣಾಧಿಕಾರಿ ಲತಾ ಅವರು ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ವೀರಾಜಪೇಟೆ ಸೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿ ಸೋಮೇಶ್ ಮಾತನಾಡಿ, ಮರ ಕಡಿಯುವ ಮೊದಲು ಸೆಸ್ಕಾಂಗೆ ಮಾಹಿತಿ ನೀಡಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು. ಆದರೆ ಯಾವುದೇ ಮಾಹಿತಿ ನೀಡದೆ ಕೆಲಸ ಮಾಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಶವ ಪರೀಕ್ಷೆಗಾಗಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.