ಸಿದ್ದಾಪುರ, ಜು. ೯: ಅಭ್ಯತ್‌ಮಂಗಲ, ಅತ್ತಿಮಂಗಲ, ಕಾಟಿಬಾಣೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಿದರು.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ಶಾಖೆಯ ವ್ಯಾಪ್ತಿಯ ಅಭ್ಯತ್‌ಮಂಗಲ, ಕಾಟಿಬಾಣೆ, ಅರೆಕಾಡುವಿನಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಜನವಸತಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ಸಂದರ್ಭ ೮ ಮರಿ ಆನೆಗಳು ಹಾಗೂ ೧೮ ದೊಡ್ಡ ಕಾಡಾನೆಗಳು ಸೇರಿ ೨೬ ಕಾಡಾನೆಗಳು ಕಂಡುಬAದವು ಎಂದು ತಂಡದ ಸಿಬ್ಬಂದಿಗಳು ಮಾಹಿತಿ ನೀಡಿದರು. ಮರಿ ಆನೆಗಳೊಂದಿಗೆ ಇದ್ದ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಅಭ್ಯತ್‌ಮಂಗಲ ಗ್ರಾಮದ ಕಾಫಿ ತೋಟದೊಳಗೆ ಉಳಿದುಕೊಂಡಿವೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ನದಿ ದಾಟಿ ಹೋಗಲು ಸಾಧ್ಯವಾಗದೇ ಕೆಲವು ಕಾಡಾನೆಗಳು ಗ್ರಾಮದ ಕಾಡಿನಲ್ಲಿ ಸೇರಿಕೊಂಡಿವೆ. ಒಂದು ಆನೆ ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿಯ ವಸತಿ ಪ್ರದೇಶದಲ್ಲಿ ಸುತ್ತಾಡಿರುವ ದೃಶ್ಯಗಳು ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ.ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಆರ್. ಅವರ ಮಾರ್ಗದರ್ಶನದಲ್ಲಿ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್, ಅರಣ್ಯ ಸಿಬ್ಬಂದಿ, ಆರ್‌ಆರ್‌ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.