ಮಡಿಕೇರಿ, ಜು. ೯: ಕಳೆದ ಎರಡು, ಮೂರು ದಿನಗಳಿಂದ ಭಾರೀ ಬಿರುಸು ತೋರಿದ್ದ ಪುನರ್ವಸು ಮಳೆಯ ಆರ್ಭಟ ಕೊಂಚ ಇಳಿಮುಖವಾದಂತಿದೆ. ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾದಂತಿದ್ದರೂ ಮುಂಗಾರಿನ ಛಾಯೆ ಮುಂದುವರಿದಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೮೮ ಇಂಚು ಮಳೆಯಾಗಿದೆ.
ವಿದ್ಯುತ್ ಸಮಸ್ಯೆ ಇನ್ನೂ ಮುಂದುವರಿದಿದ್ದು, ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಬಗೆಹರಿದಿಲ್ಲ. ಹಲವು ಗ್ರಾಮಗಳು ಸತತ ಹಲವು ದಿನಗಳಿಂದ ವಿದ್ಯುತ್ ಕಾಣದಂತಾಗಿದೆ. ನದಿ - ತೊರೆ - ತೋಡುಗಳಲ್ಲಿ ಏರಿಕೆಯಾಗಿರುವ ನೀರಿನ ಮಟ್ಟವೂ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಗಳು ತಿಳಿಸಿವೆ.
ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨ ಇಂಚು, ವೀರಾಜಪೇಟೆ ೨.೦೫, ಪೊನ್ನಂಪೇಟೆ ೨, ಸೋಮವಾರಪೇಟೆ ೨.೭೯ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೦.೫೭ ಇಂಚು ಮಳೆಯಾಗಿದೆ.
ಈ ತನಕ ೨೭.೧೪ ಇಂಚು
ಜಿಲ್ಲೆಯಲ್ಲಿ ಜನವರಿಯಿಂದ ಈತನಕ ಸರಾಸರಿ ೨೭.೧೪ ಇಂಚು ಮಳೆಯಾದಂತಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೬೫.೩೮ ಇಂಚು ಮಳೆ ದಾಖಲಾಗಿತ್ತು.
ಹೋಬಳಿವಾರು ವಿವರ
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯ ಶಾಂತಳ್ಳಿ ಹೋಬಳಿಯಲ್ಲಿ ೫ ಇಂಚುಗಳಷ್ಟು ಮಳೆಯಾಗಿದೆ. ಭಾಗಮಂಡಲ ೩.೨೮, ಮಡಿಕೇರಿ ೧.೧೪, ನಾಪೋಕ್ಲು ೨.೭೨, ಸಂಪಾಜೆ ೦.೮೨, ವೀರಾಜಪೇಟೆ ೨.೫೩, ಅಮ್ಮತ್ತಿಯಲ್ಲಿ ೧.೬೨ ಇಂಚು ಮಳೆಯಾಗಿದೆ. ಹುದಿಕೇರಿ ೨, ಶ್ರೀಮಂಗಲ ೪.೦೨, ಪೊನ್ನಂಪೇಟೆ ೧.೨೮, ಬಾಳೆಲೆ ೦.೭೧, ಸೋಮಮವಾರಪೇಟೆ ೨.೩೦, ಶನಿವಾರಸಂತೆ ೨, ಕೊಡ್ಲಿಪೇಟೆ ೨.೦೪, ಸುಂಟಿಕೊಪ್ಪ ೦.೮೮, ಕುಶಾಲನಗರ ಹೋಬಳಿ ೦.೨೬ ಇಂಚು ಮಳೆಯಾಗಿದೆ.
ಮಳೆ ಇಳಿಮುಖವಾದರೂ ಮತ್ತೆ ರಭಸ ಕಾಣುವ ಆತಂಕವೂ ಜನರಲ್ಲಿದೆ. ಮೂರು ದಿನಗಳ ಗಾಳಿ - ಮಳೆಗೆ ಹಲವಷ್ಟು ಹಾನಿಗಳೂ ಉಂಟಾಗಿರುವುದರಿAದ ಈ ಆತಂಕ ಜನರಲ್ಲಿದೆ. ಗ್ರಾಮೀಣ ಭಾಗದಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಲು ಸೆಸ್ಕ್ ಗಮನ ಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಹುಲಿತಾಳದಲ್ಲಿ ಮೇಲ್ಛಾವಣಿ ಕುಸಿದು ಮನೆಗೆ ಹಾನಿ
ಮಡಿಕೇರಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿ ಉಂಟಾಗುತ್ತಿದ್ದು, ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾನಿಗೊಳಗಾಗಿದೆ.
ಹುಲಿತಾಳ ಗ್ರಾಮದ ನಿವಾಸಿ ಎಚ್.ಟಿ. ಜಾನಕಿ ಅವರ ಮನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದೆ. ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದುಬಿದ್ದ ಪರಿಣಾಮ ಮನೆಯೊಳಗಿನ ಪೀಠೋಪಕರಣಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಜಖಂಗೊAಡಿವೆ. ಘಟನೆ ನಡೆದ ವೇಳೆ ಮನೆಯೊಳಗೆ ಯಾರೂ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವೇ ಕ್ಷಣಗಳ ವ್ಯತ್ಯಾಸದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಕಳೆದ ಬಾರಿಯ ಮಳೆಯಲ್ಲಿಯೂ ಇದೇ ಮನೆ ಭಾಗಶಃ ಹಾನಿಗೊಳಗಾಗಿತ್ತು. ಈ ಬಾರಿ ಸುರಿದ ಧಾರಾಕಾರ ಮಳೆಯಿಂದ ಮನೆಯ ಮೇಲ್ಛಾವಣಿಯು ಸಂಪೂರ್ಣ ಕುಸಿದು ಬಿದ್ದಿದ್ದು, ಮನೆ ವಾಸಯೋಗ್ಯ ಸ್ಥಿತಿಯನ್ನು ಕಳೆದುಕೊಂಡಿದೆ. ಇದರಿಂದ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾಹಿತಿ ತಿಳಿದು ಸ್ಥಳೀಯ ಪಂಚಾಯಿತಿ ಮಾಜಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಅಂದಾಜು ಮಾಡಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ತುರ್ತು ನೆರವು ಒದಗಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಮತ್ತು ಶಿಥಿಲಗೊಂಡ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭತ್ತದ ಬಿತ್ತನೆಯತ್ತ ಕೃಷಿಕರ ಚಿತ್ತ
ಕಣಿವೆ : ಈ ಬಾರಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿಲ್ಲ.
ಆದಾಗ್ಯೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆವ ಕೃಷಿಕರು ಮಳೆ ಬರುವ ನಿರೀಕ್ಷೆ ಇಟ್ಟು ಜಲಾಶಯ ಭರ್ತಿಯಾಗುವ ಕನಸು ಹೊತ್ತು ಭತ್ತದ ಬಿತ್ತನೆಯತ್ತ ಚಿತ್ತ ಹರಿಸಿದ್ದಾರೆ.
ಮಳೆ ಬರುವುದು ತಡವಾದರೂ ಕೂಡ ಮುಂದಿನ ದಿನಗಳಲ್ಲಿ ಮಳೆ ಬಂದೇ ಬರುತ್ತದೆ. ಜಲಾಶಯ ಭರ್ತಿಯಾಗುತ್ತದೆ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿ ಬಿತ್ತನೆಗೆ ತೊಡಗಿಸಿಕೊಂಡಿರುವುದಾಗಿ ಶರತ್ ಕುಮಾರ್ ಹೇಳಿದರು.
ರಾಜಮುಡಿ ಹಾಗೂ ರಾಜಭೋಗ ಭತ್ತದ ಕಟಾವಿಗೆ ೧೨೦ ದಿನಗಳು ಬೇಕು. ಸೋನೆ ಮಳೆ ಹಿಡಿದರೆ ರಾಜಮುಡಿ ಭತ್ತದ ಬಿತ್ತನೆಯ ಅಗೆ ಹಾಕಲು ಆಗಲ್ಲ. ಹಾಗಾಗಿ ಈಗ ಬರ ಅಗೆಯ ಸಿದ್ದತೆಯಲ್ಲಿ ತೊಡಗಿದ್ದೇವೆ ಎಂಬುದು ಈ ಭಾಗದ ಕೃಷಿಕರ ಮಾತು.
ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯಲು ಹೆಚ್ಚಿದ ಕೃಷಿ ಕಾರ್ಮಿಕರ ಕೂಲಿ, ಬಿತ್ತನೆ ಬೀಜ, ರಸಗೊಬ್ಬರ ಮೊದಲಾದ ಕೃಷಿ ಪರಿಕರಗಳ ಬೆಲೆ ಹೆಚ್ಚಳದಿಂದಾಗಿ ೩೦ ರಿಂದ ೪೦ ಸಾವಿರ ಖರ್ಚಾಗುತ್ತದೆ.
೧೨೦ ದಿನಗಳ ಬಳಿಕ ಕಟಾವು ಮಾಡಿದಾಗ ಒಂದು ಎಕರೆ ಗದ್ದೆಯಲ್ಲಿ ೧೫ ರಿಂದ ೨೦ ಎಕರೆಯಷ್ಟು ಭತ್ತದ ಫಸಲು ಬಂದರೆ ಸಾಕು ಎಂಬುದು ರೈತರ ಆಶಾಭಾವನೆಯಾಗಿದೆ.
ಕಣಿವೆ ಬಳಿ ಏರಿದ ಪ್ರವಾಹ
ಕಣಿವೆ : ಮಳೆಯ ಪ್ರಮಾಣ ಗುರುವಾರ ಕುಶಾಲನಗರ ವ್ಯಾಪ್ತಿಯಲ್ಲಿ ತಗ್ಗಿದ್ದರೂ ಕೂಡ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಕಂಡಿದೆ.
ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ನದಿನೀರಿನ ಪ್ರಮಾಣದ ಹೆಚ್ಚಳದಿಂದಾಗಿ ವಿಶಾಲವಾದ ನದಿಯ ತೀರತುಂಬಿದ ಹರಿವಿನೊಂದಿಗೆ ನೋಡುಗರ ಕಣ್ಮನ ಸೆಳೆಯುತ್ತಿದೆ.
ನದಿ ದಂಡೆಯ ಉದ್ದಕ್ಕೂ ಬಿಸಾಡಿರುವ ಪ್ಲಾಸ್ಟಿಕ್ ಖಾಲಿ ಬಾಟಲಿಗಳು ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳು ನದಿಯಲ್ಲಿ ತೇಲಿ ಬಂದು ಕಣಿವೆ ದೇವಾಲಯದ ತಿರುವಿನಲ್ಲಿ ಸಂಗ್ರಹಗೊAಡAತೆ ಒಂದು ಬದಿಯಲ್ಲಿ ಕಾಣುತ್ತಿರುವುದು ಮಾತ್ರ ದುರುಳರು ನದಿಯನ್ನು ಕಸದ ತೊಟ್ಟಿಯಾಗಿ ಮಾರ್ಪಡಿಸಿರುವುದರ ಹೆಗ್ಗುರುತಾಗಿ ಕಂಡು ಬರುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.!