ಗೋಣಿಕೊಪ್ಪ ವರದಿ, ಜು. ೯: ಕೊಡವ ಜಾನಪದದಿಂದ ಕೊಡವ ಜನಾಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಪ್ಪ ಅಭಿಪ್ರಾಯಪಟ್ಟರು.
ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆಯಲ್ಲಿ ೧೨ನೇ ಪುಸ್ತಕ ಪತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ನೀಡಿದ ಜಾನಪದ ಕೊಡವ ಭಾಷೆ, ಜನಾಂಗಕ್ಕೆ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ. ಜಾನಪದವನ್ನು ಉಳಿಸಿಕೊಂಡು ಕೊಡವಾಮೆಯನ್ನು ಪೋಷಿಸುವ ಕಾರ್ಯ ಮುಖ್ಯ. ಹಿಂದೆ ಕಡಿಮೆ ಶಿಕ್ಷಣ ಇದ್ದರೂ ಕೂಡ ನೀಡಿದ ಪದ ಬಳಕೆ, ಪಟ್ಟೋಲೆ ಪಳಮೆ ಕೂಡ, ಬಾಳೋಪಾಟ್, ಪೊಲ್ಚಿ ಪಾಟ್, ಮಂಗಲ ಪಾಟ್, ದೇವಡ ಪಾಟ್, ದೇವಮಕ್ಕ ದೇಬುವ ಪಾಟ್ ಅಷ್ಟೊಂದು ಅರ್ಥ ಗರ್ಭಿತ ಮತ್ತು ಹಿನ್ನೆಲೆ ಆಚರಣೆಗೆ ಮೂಲವಾಗಿದೆ. ಇಂತಹ ಜ್ಞಾನವನ್ನು ಯಾವ ಶಿಕ್ಷಣ ಕೂಡ ನೀಡಲು ಸಾಧ್ಯವಿಲ್ಲ ಎಂದರು. ಬಾಳೋಪಾಟ್ ಹಿಂದಿನ ಕಾಲದ ಕೊಡವರ ಬಾಯಲ್ಲಿ ಹಾಡಿನ ರೂಪದಲ್ಲಿ ಬರುತ್ತಿತ್ತು. ನಂತರದ ವರ್ಷಗಳಲ್ಲಿ ಸಿನಿಮಾ ಹಾಡು ಗುನುಗುವಂತಾಗಿದೆ. ಆದರೆ, ಬಾಳೋಪಾಟ್‌ನಲ್ಲಿರುವ ಸಾಲುಗಳು ನಮ್ಮ ಬದುಕಿಗೆ ಸನ್ಮಾರ್ಗ ಎಂಬ ಅರಿವು ಮುಖ್ಯವಾಗಿದೆ.
೩೩ ವರ್ಷದ ಇತಿಹಾಸದಲ್ಲಿ ಪುಸ್ತಕ ಪತ್ತಾಯ ವಿಶೇಷ ಕಾರ್ಯಕ್ರಮವಾಗಿದೆ. ಇದು ೧೨ ನೇ ಪುಸ್ತಕ ಪತ್ತಾಯಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಮಾನದವರು ಕೂಡ ಕೊಡವ ಭಾಷೆ, ಆಚಾರ ವಿಚಾರ ಪೋಷಣೆಗೆ ತನ್ನದೇ ಆದ ಕಾಣಿಕೆ ನೀಡುತ್ತಿದ್ದಾರೆ ಎಂಬುದು ಮುಖ್ಯ ಎಂದರು. ಹಿರಿಯರು ಕೊಡವ ಸಂಸ್ಕೃತಿಯನ್ನು ಜ್ಞಾನದ ಮೂಲಕ ಪುಸ್ತಕದಲ್ಲಿ ನೀಡಲಾಗಿದೆ. ಇದರಿಂದ ನಾವು ನಮ್ಮ ಸಂಸ್ಕೃತಿಯನ್ನು ಮುನ್ನಡೆಸಲು ಸಾಧ್ಯವಾಗಿದೆ. ಆದ್ದರಿಂದ ಕೊಡವರು ಉನ್ನತ ಸ್ಥಾನ ಪಡೆಯಲು ಕೂಡ ಸಾಧ್ಯವಾಗಿದೆ. ಇದೆಲ್ಲವೂ ಒಂದು ಕಡೆ ಸಂಗ್ರಹ ಮಾಡಿಕೊಳ್ಳುವ ಮೂಲಕ ಎಲ್ಲಾ ಭಾಗದಲ್ಲಿಯೂ ತಿಳಿಯುವಂತಾಗಿದೆ ಎಂದು ಅವರು ಹೇಳಿದರು.
ಕೊಡವ ಭಾಷೆಯ ಉಚ್ಚಾರಣೆ ಮುಖ್ಯ. ಇದರಿಂದ ಭಾಷೆ ಮೂಲ ಉಳಿಯಲು ಸಾಧ್ಯವಿದೆ. ಇತ್ತೀಚಿನ ಕಾಲದಲ್ಲಿ ಉಚ್ಚಾರಣೆಯಲ್ಲಿನ ಲೋಪ ಕೂಡ ಭಾಷೆ ಮೂಲಕ್ಕೆ ಧಕ್ಕೆಯಾಗಿದೆ ಎಂದರು. ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ ಮಾತನಾಡಿ, ಪತ್ತಾಯ ಎಂಬ ಪದ ಒಂದು ಕುಟುಂಬದ ವ್ಯಾಪ್ತಿಗೆ ಮೀಸಲಾಗುವಷ್ಟು ಭತ್ತ ಶೇಖರಿಸುವ ವ್ಯವಸ್ಥೆಯಾಗಿದೆ. ಇದೇ ರೀತಿ ಪುಸ್ತಕ ಕೂಡ ಇಡೀ ಕುಟುಂಬಕ್ಕೆ ಜ್ಞಾನವನ್ನು ನೀಡುವಂತಾಗಲಿ. ಹೆಚ್ಚು ಸಾಹಿತ್ಯ ಹೊರ ಬರುವಂತಾಗಬೇಕು ಎಂದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಪುಸ್ತಕ ಪತ್ತಾಯ ಕಾರ್ಯಕ್ರಮದಿಂದ ಜ್ಞಾನಾರ್ಜನೆಗೆ ಸಹಕಾರಿ. ಎಲ್ಲಾ ಕ್ಷೇತ್ರದ ಸಾಹಿತ್ಯಗಳು ಸಿಗುವಂತಾಗಿದೆ ಎಂದರು.
ದಾನಿ ಚಿರಿಯಪಂಡ ರುಕ್ಮಿಣಿ ನಾಣಯ್ಯ ಮಾತನಾಡಿ, ಸಂಸ್ಕೃತ ಭಾಷೆ ಅಳಿದುಹೋಗಿರುವ ಭಾಷೆಯ ಸ್ಥಾನದಲ್ಲಿದೆ. ಇದೇ ರೀತಿ ಕೊಡವ ಭಾಷೆಯನ್ನು ಬಳಕೆ ಕಡಿಮೆ ಮಾಡಿದಷ್ಟು ಕೊಡವ ಭಾಷೆ ಕೂಡ ನಶಿಸಿಹೋಗುವ ಹಂತಕ್ಕೆ ಬಾರದ ರೀತಿಯಲ್ಲಿ ಭಾಷೆಯನ್ನು ಬಳಸಿಕೊಳ್ಳಬೇಕಿದೆ. ಭಾಷೆ ಇಲ್ಲದೆ ಕೊಡವ ಜನಾಂಗವನ್ನು ಊಹಿಸಲು ಸಾಧ್ಯವಿಲ್ಲ. ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೊಟ್ಟ್ಕತ್ತೀರ ಪಿ. ಸೋಮಣ್ಣ, ಡಾ. ಚೆಪ್ಪುಡಿರ ಜಿ. ಕುಶಾಲಪ್ಪ ಸೇರಿದಂತೆ ಹಲವು ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಪುಸ್ತಕ ಪತ್ತಾಯ ಸ್ಥಾಪನೆಗೆ ವೇದಿಕೆಯಿಂದ ೧೦ ಸಾವಿರ ರೂ. ಚೆಕ್ ಹಸ್ತಾಂತರ ಮಾಡಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಪ್ಪ, ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ನಾಯಂದೀರ ಶಿವಾಜಿ, ಡಾ. ಕಂಬೇಯAಡ ಡೀನಾ ಬೋಜಣ್ಣ, ಪಾನಿಕುಟ್ಟಿರ ಕುಟ್ಟಪ್ಪ, ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ, ದಾನಿ ಚಿರಿಯಪಂಡ ರುಕ್ಮಿಣಿ ನಾಣಯ್ಯ ಅವರುಗಳು ಸನ್ಮಾನ ಸ್ವೀಕರಿಸಿದರು.