ಗೋಣಿಕೊಪ್ಪ ವರದಿ, ಜು. ೮: ಮಲ್ಮ ಬೆಟ್ಟದಲ್ಲಿ ಭೂ ಪರಿವರ್ತನೆ ಮುನ್ನವೇ ನಡೆದಿರುವ ಪರಿಸರ ನಾಶವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ ಒತ್ತಾಯಿಸಿದ್ದಾರೆ.

ಮಲ್ಮ ವ್ಯಾಪ್ತಿಯಲ್ಲಿ ಸುಮಾರು ೭೨ ಏಕರೆ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಖರೀದಿಸಿ, ವಾಣಿಜ್ಯ ಚಟುವಟಿಕೆಗೆ ಮುಂದಾಗಿರುವ ವಿಚಾರದಲ್ಲಿ ಸ್ಥಳೀಯರು ವಿರೋಧದಿಂದ ಯೋಜನೆ ಕೈಬಿಟ್ಟಿದ್ದರೂ ಕೂಡ ಭೂನಾಶದ ಬಗ್ಗೆ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಭೂಪರಿವರ್ತನೆಯಾಗದೆ ಅದೇ ಜಾಗದಲ್ಲಿ ಅರಣ್ಯ ನಾಶ ಮಾಡಿರುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದರು.

ಮಲ್ಮ ಬೆಟ್ಟದ ವ್ಯಾಪ್ತಿಗೆ ಒಳಪಟ್ಟು ಮತ್ತೊಬ್ಬ ಉದ್ಯಮಿ ಕೂಡ ಸುಮಾರು ೧೩ ಏಕರೆ ಜಾಗವನ್ನು ಖರೀದಿಸಿ ಪ್ರಕೃತಿ ನಾಶ ಮಾಡಿರುವುದು ಕೂಡ ದುರಂತವಾಗಿದೆ. ಈ ಬಗ್ಗೆ ಕೂಡ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು.

ಈಗಾಗಲೇ ಸಂಘದಿAದ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕೃತಿ ಮತ್ತು ಜೀವ ವೈವಿಧ್ಯತೆ ಮೇಲಿನ ದೌರ್ಜನ್ಯ ಕಂಡು ಬಂದಿದೆ. ದಕ್ಷಿಣ ಭಾರತದ ಜೀವ ನದಿ ಕಾವೇರಿ ಉಗಮ ಸ್ಥಾನದ ಮೂಲ ಸ್ಥಾನವಾಗಿದ್ದು, ಈ ಬಗ್ಗೆ ನಿರ್ಣಾಯಕ ಹೋರಾಟ ಅಗತ್ಯವಾಗಿದೆ.

೪೫ ರಿಂದ ೫೦ ಡಿಗ್ರಿ ಕಡಿದಾದ ಪೂರ್ವಾಭಿಮುಖದ ಹುಲ್ಲುಗಾವಲು ಪ್ರದೇಶ, ಅದರ ನಡುವಿನ ಶೋಲಾ ಅರಣ್ಯ, ಅಲ್ಲಿನ ಅಪರೂಪದ ನೀಲಕುರುಂಜಿ ಹೂ ಗಿಡ ಇರುವುದು ಕೂಡ ದೃಢಪಟ್ಟಿದೆ. ಇಲ್ಲಿ ಯಾವ ಮಾನವ ಹಸ್ತಕ್ಷೇಪ ಕೂಡ ನಡೆಯುವುದಿಲ್ಲ. ಆನೆ, ಹುಲಿಗಳ ಆವಾಸ ಸ್ಥಾನಕ್ಕೆ ಧÀಕ್ಕೆಯಾಗದಂತೆ ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.

೧೯೬೩ರ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆಯಂತೆ ಸಾಂಪ್ರದಾಯಿಕ ಬೆಟ್ಟ ಮತ್ತು ಇಳಿಜಾರು ಪ್ರದೇಶವಾದ ಮಲ್ಮ ಬೆಟ್ಟವನ್ನು ತಕ್ಷಣವೇ ಸುಪರ್ಧಿಗೆ ಪಡೆದು ಮೀಸಲು ಅರಣ್ಯ ಎಂದು ಘೋಷಿಸಬೇಕಿದೆ. ಸುಪ್ರೀಂ ಕೋರ್ಟ್ ಗೋವರ್ಧನ್ ವರದಿ ಪ್ರಕಾರ ಇಂತಹ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂದು ನಿಯಮ ರೂಪಿಸಲಾಗಿದೆ. ಈ ಬಗ್ಗೆ ಎಚ್ಚರ ಅವಶ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಚೇಂದAಡ ಅಯ್ಯಪ್ಪ, ನಿರ್ದೇಶಕರಾದ ಕೋದಂಡ ಅದೀಪ್, ಪಾಲೇಕಂಡ ವಿಶಾಲ್ ಪೊನ್ನಪ್ಪ ಇದ್ದರು.