ಮಡಿಕೇರಿ, ಜು. ೮: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯದ ಮೂರನೇ ದಿನದ ಕೈಂಕರ್ಯಗಳು ಇಂದು ವಿಧಿವತ್ತಾಗಿ ಜರುಗಿದವು.
ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆಯಿಂದ ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವಕಲಶ ಪೂಜೆ, ಸಂಹಾರ ತತ್ವಕಲಶ ಹೋಮ, ಶಯ್ಯಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಧ್ಯಾನ ಸಂಕೋಚ, ಜೀವ ಕಲಶಪೂಜೆ, ಜೀವೋಧ್ವಾಸನೆ, ಜೀವಕಲಶ ಶಯ್ಯಾಗಮನ ಶಯನ ಸಂಜೆ, ಧ್ಯಾನ ದಿವಸ, ಬ್ರಹ್ಮ ಕಲಶಪೂಜೆ, ಅಧಿವಾಸ ಹೋಮ, ಪರಿಕಲಶ ಪೂಜೆ, ಪ್ರಸಾದ ಅಧಿವಾಸ, ಪೀಠಾಧಿವಾಸ, ಕಲಶಾಧಿವಾಸ ಪೂಜೆಗಳು ಜರುಗಿದವು.
ತಾ. ೯ ರಂದು (ಇಂದು) ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ತತ್ವಹೋಮ, ತತ್ವ ಕಲಶಪೂಜೆ, ೯.೦೯ ರಿಂದ ೧೦.೨೨ ರ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ಮೃತ್ಯುಂಜಯ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವ ಕಲಶಾಭಿಷೇಕ, ಶಿಖರ ಪ್ರತಿಷ್ಠೆ ಮುಂದುವರೆದು ತತ್ವಕಲಶಾಭಿಷೇಕ, ೧.೩೦ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.
ಮೂರನೇ ದಿನದ ಕೈಂಕರ್ಯದಲ್ಲೂ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷವಾಗಿ ಈ ದಿನದಂದು ದೇವಾಲಯದ ಈ ಹಿಂದಿನ ಅರ್ಚಕರಾಗಿದ್ದ ವೆಂಕಟರಮಣ ಸ್ವಾಮಿ ದಂಪತಿಯನ್ನು ಗೌರವಿಸಲಾಯಿತು.
ದೇವಸ್ಥಾನ ಹೂವಿನ ಅಲಂಕಾರ ಹಾಗೂ ವಿದ್ಯುತ್ ಅಲಂಕಾರದೊAದಿಗೆ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಭಕ್ತರು ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.