ಚೆಟ್ಟಳ್ಳಿ, ಜು. ೮: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಚೆಟ್ಟಳ್ಳಿ-ಕತ್ತಲೆಕಾಡು ಮುಖ್ಯ ರಸ್ತೆಯಲ್ಲಿ ಮಳೆನೀರು ರಸ್ತೆಯ ಮೇಲೆಯೇ ಹರಿಯತೊಡಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ರಸ್ತೆ ಬದಿಯ ಚರಂಡಿಗಳ ಶುಚಿತ್ವ ಕಾರ್ಯವನ್ನು ಕೈಗೊಂಡಿದೆ.

ಹಿಟಾಚಿ ಯಂತ್ರ ಹಾಗೂ ಇಲಾಖೆಯ ಸಿಬ್ಬಂದಿಯ ನೆರವಿನಿಂದ ಚರಂಡಿಗಳಲ್ಲಿ ಮುಚ್ಚಿಹೋಗಿದ್ದ ಮಣ್ಣು, ಕಸ ಹಾಗೂ ಕಾಡುಗಳನ್ನು ತೆರವುಗೊಳಿಸಿ, ಮಳೆನೀರು ಸುಗಮವಾಗಿ ಹರಿದುಹೋಗುವಂತೆ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ರಸ್ತೆ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಇಲಾಖೆ ಈ ಕ್ರಮ ಕೈಗೊಂಡಿದೆ.

ಆದರೆ, ಮಳೆಗಾಲ ಆರಂಭವಾಗುವ ಮುನ್ನವೇ ರಸ್ತೆ ಬದಿಯ ಕಾಡುಗಳನ್ನು ತೆರವುಗೊಳಿಸುವುದು, ಚರಂಡಿಗಳ ಸಮಗ್ರ ಶುಚಿತ್ವ ನಡೆಸುವುದು ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತಹ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮಳೆ ಆರಂಭವಾದ ಬಳಿಕ ಕಾಮಗಾರಿ ಕೈಗೊಂಡಿರುವುದರಿAದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಮಳೆಗಾಲಕ್ಕೂ ಮುನ್ನ ಅಗತ್ಯ ಮುಂಜಾಗ್ರತಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸ್ಥಳೀಯರು ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.