ಪಾಲಿಬೆಟ್ಟ, ಜು. ೮: ಚುನಾವಣಾ ಆಯೋಗವು ಜೂನ್ ೨೯ರಿಂದ ಆರಂಭಿಸಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಎಸ್ಐಆರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ಉಪನ್ಯಾಸಕ ಪಿ.ಆರ್. ಶಿವದಾಸ್ ಹಾಗೂ ಪ್ರಾಂಶುಪಾಲ ಕೆ.ಕೆ. ಶೈನ್ ಅವರು ವಿದ್ಯಾರ್ಥಿಗಳಿಗೆ ಎಸ್ಐಆರ್ ಪ್ರಕ್ರಿಯೆಯ ಮಹತ್ವ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಮಾಹಿತಿ ನೀಡಿದರು.
ಬಳಿಕ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೆರವಣಿಗೆ ನಡೆಸಿ, ಬಿತ್ತಿಪತ್ರಗಳನ್ನು ವಿತರಿಸುವುದರ ಜೊತೆಗೆ ಘೋಷಣೆಗಳನ್ನು ಕೂಗಿ ಎಸ್ಐಆರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜಾಗೃತಿ ಮೆರವಣಿಗೆಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಕೇಶ್, ಪೊಲೀಸ್ ಇಲಾಖೆಯ ಶ್ರೀನಿವಾಸ್ ಹಾಗೂ ಸಜಿತ್, ಅರಣ್ಯ ಇಲಾಖೆಯ ಶಶಿ ಪಿ.ಟಿ. ಚಾಲನೆ ನೀಡಿದರು.
ಮೆರವಣಿಗೆಯ ಬಳಿಕ ಪಾಲಿಬೆಟ್ಟ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಎಸ್ಐಆರ್ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಿ.ಆರ್. ಶಿವದಾಸ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.